ಕೆ.ವಿ.ಎನ್ ದೊಡ್ಡಿ ಗ್ರಾಮದ ಜಮೀನೊಂದಕ್ಕೆ ಕಾಡಾನೆಗಳು ಲಗ್ಗೆ ಇಟ್ಟು ತೆಂಗಿನಮರವನ್ನು ನಾಶಪಡಿಸಿರುವುದು.
ಹನೂರು: ತಾಲೂಕಿನ ಕೆ.ವಿ.ಎನ್. ದೊಡ್ಡಿ ಗ್ರಾಮದ ಜಮೀನೊಂದಕ್ಕೆ ಸೋಮವಾರ ರಾತ್ರಿ ಕಾಡಾನೆಗಳು ಲಗ್ಗೆ ಇಟ್ಟು ತೆಂಗಿನಮರ, ಮುಸುಕಿನ ಜೋಳ ಹಾಗೂ ಸೋಲಾರ್ ತಂತಿ ಬೇಲಿಯನ್ನು ನಾಶಪಡಿಸಿವೆ.
ಗ್ರಾಮದ ಶಂಕರ್ ಅವರ ಜಮೀನಿಗೆ ರಾತ್ರಿ ಸಮೀಪದ ಅರಣ್ಯ ಪ್ರದೇಶದಿಂದ ಲಗ್ಗೆ ಇಟ್ಟ ಕಾಡಾನೆಗಳು ಸೋಲಾರ್ ತಂತಿ ಬೇಲಿಯನ್ನು ನಾಶಪಡಿಸಿ 10 ತೆಂಗಿನ ಮರ ಹಾಗೂ ಮುಸುಕಿನ ಜೋಳದ ಫಸಲನ್ನು ನಾಶಪಡಿಸಿವೆ.
ಈ ಭಾಗದಲ್ಲಿ ಹಲವು ತಿಂಗಳಿನಿಂದಲೂ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇವುಗಳಿಗೆ ಕಡಿವಾಣ ಹಾಕುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಕಾಡಾನೆಗಳು ನಿರಂತರ ದಾಳಿ ನಡೆಸುತ್ತಲೇ ಇವೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕಾಡಾನೆಗಳಿಗೆ ಕಡಿವಾಣ ಹಾಕಬೇಕು. ಜತೆಗೆ ಬೆಳೆನಷ್ಟಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು ಎಂದು ರೈತ ಶಂಕರ್ ಒತ್ತಾಯಿಸಿದ್ದಾರೆ.