ಚಾಮರಾಜನಗರದ ರೈಲು ನಿಲ್ದಾಣದ ರಸ್ತೆಯಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸಾಲು ಗಿಡ ನಡೆಸುವ ಕಾರ್ಯಕ್ರಮದಲ್ಲಿ ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಪರಿಸರವಾದಿ ಪುಣಜನೂರು ದೊರೆಸ್ವಾಮಿ ಸಸಿ ನೆಟ್ಟರು. ಸಿ.ಎಂ.ನರಸಿಂಹಮೂರ್ತಿ, ಸಿ.ಎಂ.ವೆಂಕಟೇಶ್ ಮತ್ತು ಇತರರು ಇದ್ದರು.
- ಕಾಡಾ ಮಾಜಿ ಅಧ್ಯಕ್ಷ ಜಿ.ನಿಜಗುಣರಾಜು ಬೇಸರ
- ಸಾಲು ಗಿಡಗಳ ದಶಮಾನೋತ್ಸವಕ್ಕೆ ಸಸಿ ನೆಟ್ಟು ಚಾಲನೆ
ಚಾಮರಾಜನಗರ: ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಗಿಡ,ಮರಗಳನ್ನು ಮಕ್ಕಳಂತೆ ಬೆಳೆಸುತ್ತಿದ್ದಾರೆ. ಆದರೆ ಆಡಳಿತ ವ್ಯವಸ್ಥೆ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಹಸಿರ ಹನನ ಮಾಡುತ್ತಿರುವುದು ೋರ ಅಪರಾಧ ಎಂದು ಕಾಡಾ ಮಾಜಿ ಅಧ್ಯಕ್ಷ ಜಿ.ನಿಜಗುಣರಾಜು ಬೇಸರ ವ್ಯಕ್ತಪಡಿಸಿದರು.
ವರನಟ ಡಾ.ರಾಜ್‌ಕುಮಾರ್ ಜನ್ಮದಿನದ ಅಂಗವಾಗಿ ನಗರದ ರೈಲು ನಿಲ್ದಾಣ ರಸ್ತೆಯಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸಾಲು ಗಿಡಗಳ ದಶಮಾನೋತ್ಸವ ಸಮಾರಂಭದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ಬಿ.ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿಗಾಗಿ ಗಿಡ, ಮರಗಳನ್ನು ಹಾಳು ಮಾಡುತ್ತಿರುವುದು ತಪ್ಪು. ಕಾನೂನಿನ ಪ್ರಕಾರ ಈ ರೀತಿ ಮಾಡುವುದರಿಂದ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಚಾಮರಾಜನಗರದಲ್ಲಿ ಹಸಿರು ಕಂಗೊಳಿಸುವಂತೆ ಮಾಡಿರುವ ಸಿ.ಎಂ.ವೆಂಕಟೇಶ್ ಸಾಲುಮರದ ತಿಮ್ಮಕ್ಕ ಅವರ ಸಾಲಿನಲ್ಲಿ ನಿಲ್ಲುವ ಮಾದರಿ ವ್ಯಕ್ತಿ. 10 ವರ್ಷಗಳ ಹಿಂದೆ ನಗರದ ಕ್ರೀಡಾಂಗಣ ರಸ್ತೆಯಲ್ಲಿ ಸಾಲು ಗಿಡಗಳನ್ನು ನೆಡುವ ಸಂದರ್ಭದಲ್ಲಿ ನಾನೂ ಸಹ ಇದ್ದೆ. ಈ ಸಂದರ್ಭದಲ್ಲೂ ಸಸಿ ನೆಡುವ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಸ್ಮರಿಸಿದರು.
ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿರುವ ಸಿ.ಎಂ.ವೆಂಕಟೇಶ್ ಕೆಲಸದಲ್ಲಿ ಅಳವಡಿಸಿಕೊಂಡಿರುವ ಶಿಸ್ತನ್ನು ಪರಿಸರ ಕಾಳಜಿಯ ಮೇಲೂ ಇಟ್ಟುಕೊಂಡಿದ್ದಾರೆ. ಗಿಡ, ಮರಗಳನ್ನು ಮಕ್ಕಳ ರೀತಿ ಪಾಲನೆ ಮಾಡುತ್ತಿರುವುದಕ್ಕೆ ರಾಜ್ಯಸರ್ಕಾರದಿಂದ ಮಾತ್ರವಲ್ಲದೆ ಕೇಂದ್ರ ಸರ್ಕಾರದಿಂದಲೂ ಪ್ರಶಸ್ತಿಗಳು ಬರುವಂತಾಗಲಿ. ಅವರ ಪರಿಸರ ಸೇವೆಗೆ ನಾನೂ ಸಹ ಕೈಜೋಡಿಸುತ್ತೇನೆ ಎಂದರು.
ಪರಿಸರವಾದಿ ಪುಣಜನೂರು ದೊರೆಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿ ಶ್ರೀರೂಪಾ ಅವರು ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಗಿಡ, ಮರಗಳನ್ನು ಹಾಳು ಮಾಡುತ್ತಿರುವುದಕ್ಕೆ ಕ್ರಮಹಿಸಬೇಕು. ಭವಿಷ್ಯದ ದೃಷ್ಟಿಯಿಂದ ಕೆರೆ, ಗಿಡ, ಮರಗಳ ರಕ್ಷಣೆಯಾಗಬೇಕಾಗಿದೆ. ಗಣಿಗಾರಿಕೆಯಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಗಿಡಮರಗಳ ಸಂರಕ್ಷಣೆ ಸಾರ್ಥಕ ಸೇವೆಯಾಗಿದೆ ಎಂದು ಹೇಳಿದರು.
ರೋಟರಿ ವಲಯದ ಸಹಾಯಕ ಗೌರ್ನರ್ ದೊಡ್ಡರಾಯಪೇಟೆ ಗಿರೀಶ್ ಮಾತನಾಡಿ, ಸಿ.ಎಂ.ವೆಂಕಟೇಶ್ ಅವರು ಗಿಡ ನೆಡಲು ಆರಂಭಿಸಿ 10 ವರ್ಷಗಳಾಗಿವೆ. ಡಾ.ರಾಜ್‌ಕುಮಾರ್ ಅವರ ಹೆಸರಿನಲ್ಲಿ ಗಿಡ ನೆಡುತ್ತೇನೆಂದು ಅಂದು ಪ್ರತಿಜ್ಞೆ ಮಾಡಿ ಇಂದಿಗೂ ಪರಿಸರ ಸೇವೆ ಮಾಡುತ್ತಿದ್ದಾರೆ. ಇರುವ ಕ್ಷೇತ್ರದಲ್ಲಿ ನಮ್ಮ ಹೆಜ್ಜೆ ಗುರುತು ಉಳಿಯುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಸಿ.ಎಂ.ವೆಂಕಟೇಶ್ ಪರಿಸರ ಪ್ರಜ್ಞೆಯ ಮೂಲಕ ಜಿಲ್ಲೆಯಲ್ಲಿ ಹೆಜ್ಜೆ ಗುರುತು ಉಳಿಸಿದ್ದಾರೆ ಎಂದು ಬಣ್ಣಿಸಿದರು.
ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಕನ್ನಡ ಪರ ಹೋರಾಟಗಾರ ಚಾ.ಹ.ಶಿವರಾಜು, ಅಕ್ಷಯ ಆಗ್ರೋ ಏಜೆನ್ಸಿ ಮಾಲೀಕ ಆರ್.ಯೋಗರಾಜು, ಪುಳಿಯೊಗರೆ ಹೌಸ್ ಮಾಲೀಕ ಮಹದೇವಸ್ವಾಮಿ ಮತ್ತು ಇತರರು ಇದ್ದರು.