ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾದ ಸ್ಥಳಕ್ಕೆ ಅರಣ್ಯ ಇಲಾಖೆ ನೌಕರರು ಭೇಟಿ ನೀಡಿ ಪರಿಶೀಲಿಸಿದರು.
ಗುಂಡ್ಲುಪೇಟೆ: ತಾಲೂಕಿನ ಮಡಹಳ್ಳಿ ಗ್ರಾಮದ ಹೊರ ವಲಯದ ಮಳೆನೀರು ಹಳ್ಳದಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಹೊನ್ನಪ್ಪ(ಲೋಕೇಶ್) ಅವರು ಭಾನುವಾರ ಜಮೀನಿನ ಪಕ್ಕದ ಹಳ್ಳದಲ್ಲಿ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಹುಲಿ ದಾಳಿ ನಡೆಸಿ ಎಳೆದೊಯ್ದಿದೆ. ಸೋಮವಾರ ಬೆಳಗ್ಗೆ ಹುಡುಕಾಟ ನಡೆಸಿದಾಗ ಜಮೀನಿನ ಪಕ್ಕದ ಹಳ್ಳದಲ್ಲಿ ಹಸುವಿನ ಮೃತದೇಹ ಪತ್ತೆಯಾಗಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಮಹಜರು ನಡೆಸಿ ಸೂಕ್ತ ಪರಿಹಾರದ ಭರವಸೆ ನೀಡಿದರು.
ಪರಿಹಾರದ ಬೇಡಿಕೆ:ಹುಲಿ ದಾಳಿಯಿಂದ ಹಸು ಸಾವಿಗೀಡಾಗಿದ್ದರಿಂದ ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ರೈತರ ಜೀವನಕ್ಕೆ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಆದ್ದರಿಂದ ಕೂಡಲೇ ರೈತನಿಗೆ ಸೂಕ್ತ ಪರಿಹಾರ ಕೊಡಿಸಬೇಕು. ಹುಲಿಯೊಂದು ಹಲವು ದಿನಗಳಿಂದ ಇದೇ ಪ್ರದೇಶದಲ್ಲಿ ಓಡಾಡಿಕೊಂಡಿದ್ದು, ಕೂಡಲೇ ಬೋನ್ ಇರಿಸಿ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಮಲ್ಲಿಕಾರ್ಜುನಪ್ಪ, ಶಿವಪ್ಪ, ಚೇತನ್, ರಮೇಶ್, ಮಹದೇವು ಒತ್ತಾಯಿಸಿದ್ದಾರೆ.
ರೀತಿಯಿಂದ ಇದು ಹುಲಿ ದಾಳಿ ಎಂಬುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮಸ್ಥರ ಕೋರಿಕೆಯಂತೆ ಕೂಂಬಿಂಗ್ ನಡೆಸಲಾಗಿದೆ. ಘಟನೆ ನಡೆದ ಪ್ರದೇಶದ ಪೂರ್ವ ದಿಕ್ಕಿನ ರೈತರ ಜಮೀನಿನಲ್ಲೂ ಹುಲಿ ಕಾಣಿಸಿಕೊಂಡ ಕಾರಣ ಬೋನ್ ಇರಿಸಲಾಗಿದೆ. ಗ್ರಾಮದ ರೈತರು ರಾತ್ರಿ ವೇಳೆ ಒಂಟಿಯಾಗಿ ಜಮೀನುಗಳಿಗೆ ತೆರಳಬಾರದು. ವನ್ಯಪ್ರಾಣಿಗಳು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಬೇಕು ಎಂದು ಗುಂಡ್ಲುಪೇಟೆ ಬಫರ್ ವಲಯದ ಪ್ರಭಾರ ಆರ್‌ಎಫ್‌ಒ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.