ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಗ್ರಾಮದಲ್ಲಿ ಹುಲಿ ದಾಳಿಗೆ ಬಲಿಯಾದ ಹಸುವಿನ ಮುಂದೆ ಮಹಿಳೆ ಗೋಳಾಡುತ್ತಿರುವುದು.
ಕಳೇಬರದ ಮುಂದೆ ಮಹಿಳೆ ಗೋಳಾಟ ವಿಡಿಯೋ ವೈರಲ್
ಗುಂಡ್ಲುಪೇಟೆ: ತಾಲೂಕಿನ ಮೂಡುಗೂರು ಗ್ರಾಮದ ಜಮೀನಿನಲ್ಲಿ ಗುರುವಾರ ಮೇಯುತ್ತಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಗ್ರಾಮದ ಮಹದೇವಶೆಟ್ಟಿ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಗುರುವಾರ ಮಧ್ಯಾಹ್ನ ಹುಲಿ ದಾಳಿ ನಡೆಸಿದೆ. ಹಸುಗಳ ಅರಚಾಟ ಕೇಳಿದ ಅಕ್ಕಪಕ್ಕದ ರೈತರು ಜೋರಾಗಿ ಕೂಗುತ್ತಿದ್ದಂತೆ ಹುಲಿ ಓಡಿಹೋಗಿದೆ. ವಿಷಯ ತಿಳಿದು ಜಮೀನಿಗೆ ಬಂದ ಮಹೇಶ್ ಅವರ ಪತ್ನಿ ಸತ್ತ ಹಸು ಮುಂದೆ ಕುಳಿತು ಎದೆ ಬಡಿದುಕೊಂಡು ರೋಧಿಸುತ್ತಿರುವ ವೀಡಿಯೋವನ್ನು ಗ್ರಾಮಸ್ಥರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ನೋಡುಗರ ಮನಕಲಕುವಂತಿದೆ. ಇತ್ತೀಚೆಗೆ ಮಳೆಯೂ ಬೀಳದೆ ಕೆರೆಗಳಿಗೆ ನೀರು ತುಂಬಿಸದೆ ಹೆಚ್ಚಿನ ರೈತರು ಜೀವನೋಪಾಯಕ್ಕಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಆದರೆ ಹುಲಿ ಚಿರತೆಗಳ ಕಾಟದಿಂದ ಇಂತಹವರ ಬದುಕು ದುಸ್ತರವಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಕಣಾಂಬಿ ಪೊಲೀಸರು ಹಾಗೂ ಬಫರ್ ವಲಯದ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಜಾನುವಾರು ನಷ್ಟಕ್ಕೆ ಕೂಡಲೇ ಪರಿಹಾರ ನೀಡಲಾಗುವುದು. ನಾಳೆಯಿಂದಲೇ ಕೂಂಬಿಂಗ್ ನಡೆಸಲಾಗುವುದು ಎಂದು ಪ್ರಭಾರ ವಲಯಾರಣಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.