ಪಟ್ಟಣದ ಕರ್ನಾಟಕ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ಇಂಡಿಯಾ ಕೊಳ್ಳೇಗಾಲ ತಾಲೂಕು ಘಟಕ ಉದ್ಘಾಟನಾ ಸಮಾರಂಭಕ್ಕೆ ಚಾಮರಾಜನಗರ ಜಿಲ್ಲಾ ಲೋಕಾಯುಕ್ತ ಉಪ ಅಧೀಕ್ಷಕ ಗಜೇಂದ್ರ ಪ್ರಸಾದ್ ಚಾಲನೆ ನೀಡಿದರು. ಪ್ರಭಾಕರ್, ದಯಾನಂದ, ಸಭಾರೆಡ್ಡಿ, ಎಸ್.ಗುರುಸ್ವಾಮಿ. ಮಹದೇವು ಇತರರು ಇದ್ದರು. 
ಚಾಮರಾಜನಗರ

ಭ್ರಷ್ಟಾಚಾರ ದೇಶದ ಅಭಿವೃದ್ಧಿಗೆ ಮಾರಕ

ಪ್ರಮುಖ ಮುಖ್ಯಾಂಶಗಳು

  • ಚಾಮರಾಜನಗರ ಜಿಲ್ಲಾ ಲೋಕಾಯುಕ್ತ ಉಪ ಅಧೀಕ್ಷಕ ಗಜೇಂದ್ರ ಪ್ರಸಾದ್ ಅಭಿಮತ
ಕೊಳ್ಳೇಗಾಲ: ಭ್ರಷ್ಟಾಚಾರ ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಚಾಮರಾಜನಗರ ಜಿಲ್ಲಾ ಲೋಕಾಯುಕ್ತ ಉಪ ಅಧೀಕ್ಷಕ ಗಜೇಂದ್ರ ಪ್ರಸಾದ್ ಹೇಳಿದರು.

ಪಟ್ಟಣದ ಶ್ರೀ ವೆಂಕಟೇಶ್ವರ ಮಹಲ್ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ಇಂಡಿಯಾ ಕೊಳ್ಳೇಗಾಲ ತಾಲೂಕು ಘಟಕ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ರಾಜಕೀಯ ಕ್ಷೇತ್ರ, ಆಡಳಿತ ಕ್ಷೇತ್ರ, ಉದ್ಯಮ ಕ್ಷೇತ್ರದಲ್ಲಿ ಭ್ರಷ್ಟಾಚಾರ ಹಬ್ಬಿರುವುದು ಎಲ್ಲರಿಗೂ ತಿಳಿದ ವಿಚಾರ ವಾಗಿದೆ. ಭ್ರಷ್ಟಾಚಾರ ನಮ್ಮ ಕಣ್ಣೆದುರು ನಡೆಯುತ್ತಿದ್ದರೂ ಮೌನ ವಹಿಸುವುದು ಅಪರಾಧವಾಗಿರುತ್ತದೆ ಎಂದರು.
ಭ್ರಷ್ಟಾಚಾರ ಪರಿಣಾಮ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿದೆ. ಸಮಾಜದ ನೈತಿಕ ಮೌಲ್ಯ ಕುಸಿಯುತ್ತದೆ. ದುರ್ಬಲರ ಹಕ್ಕುಗಳ ದಕ್ಕೆ ಉಂಟು ಮಾಡುತ್ತದೆ. ಸಾಮಾಜಿಕವಾಗಿ ಎಲ್ಲ ಕ್ಷೇತ್ರದಲ್ಲೂ ಸಿಗಬೇಕಾದ ಅವಕಾಶವನ್ನು ಅರ್ಹರಿಗೆ ದೊರಕಲು ಅಡ್ಡಿಯಾಗುತ್ತದೆ. ಭ್ರಷ್ಟಾಚಾರ ಎಂದರೆ ಹಣ ಮಾತ್ರವೇ ಅಲ್ಲ, ಅದರ ದುಷ್ಪರಿಣಾಮಗಳು ವ್ಯಾಪಕವಾಗಿ ಹರಡುವ ಮೂಲಕ ವ್ಯವಸ್ಥೆಯನ್ನು ಹಾಳು ಮಾಡುತ್ತದೆ ಎಂದರು.
ಗಾಂಧೀಜಿ ಅವರು ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟರು. ಅಣ್ಣ ಹಜಾರೆ ಅವರು ಭ್ರಷ್ಟಾಚಾರ ನಿರ್ಮೂಲನೆ ಆಂದೋಲನ ನಡೆಸಿದರು. ಈ ಹೋರಾಟ ದೇಶದ ಮೇಲೆ ಬಹಳ ಪ್ರಭಾವ ಬೀರಿತು. ಆದರಿಂದು ಭ್ರಷ್ಟಾಚಾರ ವಿಚಾರವಾಗಿ ಸಮುದಾಯ ಗಾಢ ಮೌನ ವಹಿಸಿದೆ ಎಂದರು.
ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ಇಂಡಿಯಾ ಸಂಘಟನೆ ರಾಜ್ಯ, ಜಿಲ್ಲೆ, ತಾಲೂಕು ಮಟ್ಟಕ್ಕೆ ತಲುಪಿದೆ. ಅಂತೆಯೇ, ಕೊಳ್ಳೇಗಾಲದಲ್ಲಿ ಇಂದಿನಿಂದ ಚಾಲನೆ ದೊರೆತಿದೆ. ಸಂಘಟನೆ ಸದಸ್ಯರು ಮುಂದಿನ ದಿನಗಳಲ್ಲಿ ಹಳ್ಳಿಗಳು, ಹೋಬಳಿ, ತಾಲೂಕು ಗಳಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಬೇಕು. ಜನರಿಗೆ ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷ ಮಹದೇವು ಮಾತನಾಡಿ, ಭ್ರಷ್ಟಾಚಾರ ದೇಶವನ್ನು ವ್ಯಾಪಿಸಿದೆ. ಸರ್ಕಾರಿ ಹುದ್ದೆಗಳು ಭ್ರಷ್ಟಾಚಾರದ ರಹದಾರಿಯಾಗಿ ಬಿಟ್ಟಿವೆ. ನಾಗರಿಕರು ಭ್ರಷ್ಟಾಚಾರ ನಿರ್ಮೂಲನೆ ಗೊಳಿಸಲು ನಿಲ್ಲಬೇಕು ಎಂದರು.
ಈ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾದವರು ಹಾಗೂ ನೂತನ ಕೊಳ್ಳೇಗಾಲ ತಾಲೂಕು ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ಇಂಡಿಯಾದ ರಾಜ್ಯ ಘಟಕ ಅಧ್ಯಕ್ಷ ಪ್ರಭಾಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ದಯಾನಂದ, ರಾಜ್ಯ ಕಾರ್ಯದರ್ಶಿ ಸಭಾರೆಡ್ಡಿ, ಮೈಸೂರು ವಿಭಾಗದ ಅಧ್ಯಕ್ಷ ಎಸ್.ಗುರುಸ್ವಾಮಿ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಶಿವಮೂರ್ತಿ, ತಾಲೂಕು ಪದಾಧಿಕಾರಿಗಳು, ಹಿರಿಯ ವಕೀಲ ವೆಂಕಟಾಚಲ, ಮಹದೇವು, ಮುಳ್ಳೂರು ಶಿವಮಲ್ಲು ಮತ್ತಿತರಿದ್ದರು.