ಗುಂಡ್ಲುಪೇಟೆ ಪಟ್ಟಣದ ಜ್ನಾನಾ ಭವನದಲ್ಲಿ ಬಾಲ್ಯವಿವಾಹ ಮುಕ್ತಭಾರತ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಕಾರ್ಯಗಾರದಲ್ಲಿ ಬಸವರಾಜ ತಳವಾರ್ ಮಾತನಾಡಿದರು. ಸರಸ್ವತಿ, ಷಣ್ಮುಗಂ, ಡಾ.ಅಲೀಂಪಾಷ, ಹೇಮಾವತಿ, ಡಾ.ಸರೋಜಾ ಇದ್ದರು. 
ಚಾಮರಾಜನಗರ

ಬಾಲ್ಯವಿವಾಹ ತಡೆಗೆ ಇಲಾಖೆಗಳ ಸಮನ್ವಯ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ್ ಅಭಿಮತ
  • * ಬಾಲ್ಯವಿವಾಹ ಮುಕ್ತಭಾರತ ಅಭಿಯಾನ
  • ತಾಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಗಾರ
ಗುಂಡ್ಲುಪೇಟೆ: ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದರೆ ಸಾಮಾಜಿಕ ಪಿಡುಗಾದ ಬಾಲ್ಯವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ್ ಹೇಳಿದರು.
ಪಟ್ಟಣದ ಜ್ಞಾನ ಭವನದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬಾಲ್ಯವಿವಾಹ ಮುಕ್ತಭಾರತ ಅಭಿಯಾನದ ಅಂಗವಾಗಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯವಿವಾಹಕ್ಕೆ ನಾನಾ ಕಾರಣಗಳಿದ್ದರೂ ಇದನ್ನು ತಡೆಗಟ್ಟಲು ಸರ್ಕಾರ ಕಾನೂನುಗಳನ್ನು ಜಾರಿಗೊಳಿಸಿದೆ. ಇವುಗಳನ್ನು ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಾಗಿ ಪರಸ್ಪರ ಸಮನ್ವಯತೆಯಿಂದ ಪಾಲಿಸುವ ಮೂಲಕ ಸಾಮಾಜಿಕ ಪಿಡುಗನ್ನು ಕೊನೆಗಾಣಿಸಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಮಾತಾಡಿ, ಜಿಲ್ಲೆಯಲ್ಲಿರುವ ಮೂಢನಂಬಿಕೆಗಳು ಹಾಗೂ ಬಾಲ್ಯ ವಿವಾಹದಿಂದ ಮಗುವಿನ ಮೇಲೆ ಸಾಮಾಜಿಕವಾಗಿ ಹಾಗೂ ಮಾನಸಿಕವಾಗಿ ಆಗುವ ಪರಿಣಾಮಗಳ ಕುರಿತು ಚರ್ಚಿಸಿ ಜವಾಬ್ದಾರಿಯುತ ಕುಟುಂಬ ನಡೆಸಲು ಮಕ್ಕಳಿಗೆ ಅನುಭವದ ಅಗತ್ಯವಿದ್ದು ಅದು ವಯಸ್ಸಿಗೆ ಅನುಗುಣವಾಗಿ ಅಭಿವೃದ್ಧಿ ಹೊಂದುತ್ತದೆ. 18 ವಯಸ್ಸಿನವರೆಗೆ ಹೆಣ್ಣು ಮಕ್ಕಳು ಹಾಗೂ 21 ವಯಸ್ಸಿನವರೆಗೆ ಗಂಡು ಮಕ್ಕಳು ಶಾಲೆಯಲ್ಲಿ ಇರುವಂತೆ ನೋಡಿಕೊಳ್ಳುವುದು ಪಾಲಕರು, ಶಿಕ್ಷಕರು ಹಾಗೂ ಎಲ್ಲ ಅಧಿಕಾರಿಗಳ ಕರ್ತವ್ಯ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಚಿದಂಬರ ಮಾತನಾಡಿ ಮಕ್ಕಳಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆಗುತ್ತಿರುವ ಬೆಳವಣಿಗೆಯ ಜತೆ ಜತೆಗೆ ಸಮಾಜವು ಅವರ ಮೇಲೆ ಹಾಕುತ್ತಿರುವ ಒತ್ತಡಗಳ ಕುರಿತು ಮಾಹಿತಿ ನೀಡಿ ಅದನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಮಕ್ಕಳಿಗೆ ಸಹಕಾರ ನೀಡಬೇಕೆಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಆರ್‌ಎಲ್‌ಎಚ್‌ಪಿ ನಿರ್ದೇಶಕಿ ಸರಸ್ವತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಷಣ್ಮುಗಂ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಡಾ.ಸರೋಜಾ, ಪಟ್ಟಣ ಠಾಣೆಯ ಸಬ್ ಇನ್‌ಸ್ಪೆಕ್ಟರ್ ನರೇಶ್ ಕುಮಾರ್ ಹಾಗೂ ಇತರರು ಇದ್ದರು.