ಯಳಂದೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ವಚ್ಛತಾ ಸಂಬಂಧ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ರಾಘವೇಂದ್ರ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಮಹದೇಸ್ವಾಮಿ ಇತರರು ಇದ್ದರು. 
ಚಾಮರಾಜನಗರ

ಪರಿಸರದ ಮಹತ್ವ ಪಾಲಕರಿಗೆ ಮನವರಿಕೆ ಮಾಡಿಕೊಡಿ

ಪ್ರಮುಖ ಮುಖ್ಯಾಂಶಗಳು

  • ಪಪಂ ಆರೋಗ್ಯ ನಿರೀಕ್ಷಕ ರಾಘವೇಂದ್ರ ಸಲಹೆ
  • ಯಳಂದೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸ್ವಚ್ಛತಾ ಸಂಬಂಧ ಚಿತ್ರಕಲೆ, ಪ್ರಬಂಧ ಸ್ಪರ್ಧೆ
ಯಳಂದೂರು: ವಿದ್ಯಾರ್ಥಿಗಳು ಕಲಿಕೆ ಬಗ್ಗೆ ನಿರ್ದಿಷ್ಟ ಗುರಿ ಇರಿಸಿಕೊಂಡು ಸಾಧಿಸುವ ಕಡೆಗೆ ಚಿಂತನೆ ನಡೆಸಬೇಕು, ಜತೆಗೆ ಬದುಕುತ್ತಿರುವ ಪರಿಸರದ ಸ್ವಚ್ಛತೆಗೂ ಒತ್ತು ನೀಡಬೇಕೆಂದು ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ರಾಘವೇಂದ್ರ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಪಟ್ಣಣ ಪಂಚಾಯಿತಿ ಕಾರ್ಯಾಲಯ ಮತ್ತು ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ಎಸ್‌ಬಿಎಂ-2.0 ಯೋಜನೆಯಡಿ ಸ್ವಚ್ಛತಾ ಸಂಬಂಧ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸುತ್ತ ಹೆಚ್ಚಾಗುತ್ತಿರುವ ಪ್ಲಾಸ್ಟಿಕ್ ಬಳಕೆಯಿಂದ ಮನುಷ್ಯನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಜತೆಗೆ ಪರಿಸರ ನಾಶಕ್ಕೂ ಕಾರಣವಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಪ್ರತಿಯೊಬ್ಬರು ಜಾಗ್ರತೆ ವಹಿಸಿ ಪರಿಸರ ಉಳಿಸಬೇಕು. ಮನೆಯ ಕಸ, ಕಡ್ಡಿ ವಿಲೇವಾರಿ, ಶೌಚಗೃಹವನ್ನು ಕಡ್ಡಾಯವಾಗಿ ಬಳಸುವುದು, ತ್ಯಾಜ್ಯದ ನೀರನ್ನು ಗುಂಡಿಗೆ ಬಿಡಬೇಕು. ಜತೆಗೆ ಅಂತರ್ಜಲ ಹೆಚ್ಚುಸುವ ನಿಟ್ಟಿನಲ್ಲಿ ಗಮನಹರಿಸುವುದು ಸೇರಿದಂತೆ ಸಸಿ, ಮರ, ಸಂಕುಲಗಳನ್ನು ಉಳಿಸಿ ಬೆಳೆಸುವ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡು ಪಾಲಕರಿಗೆ ಪರಿಸರದ ಮಹತ್ವ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕೆಂದು ಸಲಹೆ ನೀಡಿದರು.
ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಮಹದೇವಸ್ವಾಮಿ ಮಾತನಾಡಿ, ಮಕ್ಕಳಿಗೆ ಪರಿಸರದ ಅರಿವು ಮುಖ್ಯ. ವಾತಾವರಣ ಕಲುಷಿತಗೊಳ್ಳದಂತೆ ಎಚ್ಚರ ವಹಿಸುವುದೂ ಮುಖ್ಯ ಎಂದು ತಿಳಿಸಿದರು. ಪಟ್ಟಣದ ವಿವಿಧ ಶಾಲೆಗಳಿಂದ ಆಗಮಿಸಿದ್ದ 120ಕ್ಕೂ ಹೆಚ್ಚು ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಪ್ರಭುಸ್ವಾಮಿ, ಕೆಪಿಎಸ್ ಶಿಕ್ಷಕ ಪುಟ್ಟಸ್ವಾಮಿ, ಪೊಲೀಸ್ ಇಲಾಖೆಯ ರಂಗಸ್ವಾಮಿ ಇತರರು ಇದ್ದರು.