ಯಳಂದೂರು ತಾಲೂಕಿನ ಕೃಷ್ಣಾಪುರ ಗ್ರಾಮದ ಬಳಿ ಇರುವ ಗೋಪಾಲಸ್ವಾಮಿ ಗ್ಯಾಸ್ ಏಜೆನ್ಸೀಸ್ ಗೋದಾಮಿನ ಬಳಿ ಸಿಲಿಂಡರ್ ಪಡೆದುಕೊಳ್ಳಲು ಜನರು ಸರತಿ ಸಾಲಿನಲ್ಲಿ ನಿಂತಿರುವುದು.
- ಬುಕ್ ಮಾಡಿ ವಾರ ಕಳೆದರೂ ಮನೆಗಳಿಗೆ ಪೂರೈಕೆ ಇಲ್ಲ
- ಸರಿಯಾದ ಮಾಹಿತಿ ನೀಡದಿರುವುದೇ ಗೊಂದಲಕ್ಕೆ ಕಾರಣ
ಯಳಂದೂರು: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಪರಿಣಾಮ ಗ್ಯಾಸ್ ಸಿಲಿಂಡರ್‌ಗಳ ಕೊರತೆಯ ಬಿಸಿ ಯಳಂದೂರಿಗೂ ತಟ್ಟಿದೆ. ಸಿಲಿಂಡರ್‌ಗಾಗಿ ದಿನನಿತ್ಯ ಸಾವಿರಾರು ಜನರು ತಾಲೂಕಿನ ಕೃಷ್ಣಪುರ ಗ್ರಾಮದಲ್ಲಿರುವ ಗ್ಯಾಸ್ ಶೇಖರಣೆಯ ಗೋದಾಮಿನ ಬಳಿ ಬೆಳಗ್ಗೆಯಿಂದ ಸಂಜೆವರೆಗೂ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಬಂದೊದಗಿದೆ.
ಗೃಹ ಬಳಕೆ ಸಿಲಿಂಡರ್‌ಗಳಿಗೆ ಯಾವುದೇ ಕೊರತೆಯಿಲ್ಲ, ಬೇಡಿಕೆಯಂತೆ ಪೂರೈಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ ಯಳಂದೂರು ಪಟ್ಟಣದಲ್ಲಿ ಸಿಲಿಂಡರ್‌ಗಳ ಸಮಸ್ಯೆ ನಿಂತಿಲ್ಲ. ಗ್ಯಾಸ್ ಏಜೆನ್ಸೀಸ್ ಮನೆಗಳಿಗೆ ಗ್ಯಾಸ್ ವಿತರಣೆ ಮಾಡುತ್ತಿಲ್ಲ. ಪಟ್ಟಣದ ಬಳೇಪೇಟೆಯಲ್ಲಿರುವ ಕಚೇರಿಯಲ್ಲೂ ವಿತರಿಸುತ್ತಿಲ್ಲ. ದಾಸ್ತಾನನ್ನು ಪಟ್ಟಣದ ಪ್ರದೇಶದಿಂದ 3 ಕಿ.ಮೀ. ದೂರವಿರುವ ಕೃಷ್ಣಪುರ ಗ್ರಾಮದ ಬಳಿಯ ತೋಟದಲ್ಲಿರುವ ಗೋದಾಮಿನಲ್ಲಿ ಇರಿಸಲಾಗಿದೆ. ಪ್ರತಿನಿತ್ಯ ಇದರ ಮುಂದೆ ಸಾವಿರಾರು ಜನರು ಸಿಲಿಂಡರ್‌ಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಗೃಹೋಪಯೋಗಿ ಸಿಲಿಂಡರ್‌ಗೆ ಯಾವುದೇ ತೊಂದರೆ ಇಲ್ಲ. ಬುಕ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಬುಕ್ ಮಾಡಿ ವಾರವಾದರೂ ವಿತರಣೆಯಾಗುತ್ತಿಲ್ಲ. ಸಂಬಂಧಪಟ್ಟ ಏಜೆನ್ಸಿ ಸಹ ಬುಕ್ ಮಾಡಿರುವ ಗ್ರಾಹಕರಿಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಗೊಂದಲ ಸೃಷ್ಟಿಯಾಗಿದೆ. ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಅಲಭ್ಯದಿಂದ ಕೆಲವು ಟೀ, ಹೋಟೆಲ್, ಅಂಗಡಿಗಳು ಬಂದ್ ಮಾಡಲಾಗಿದೆ. ಇನ್ನೂ ಕೆಲವರು ಸೌದೆ ಒಲೆಗಳ ಮೊರೆ ಹೋಗುವ ಸ್ಥಿತಿ ನಿರ್ಮಾಣಗೊಂಡಿದೆ.
ತಾಲೂಕಿನಲ್ಲಿ 16 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಪಟ್ಟಣದ ಗೋಪಾಲಸ್ವಾಮಿ ಗ್ಯಾಸ್ ಏಜೆನ್ಸಿ ಹೊಂದಿದೆ. ಸರಿಯಾಗಿ ಗ್ಯಾಸ್ ಸಿಲಿಂಡರ್ ಪೂರೈಕೆಯಾಗದ ಕಾರಣ ಪಟ್ಟಣದ ಹೊರ ಪ್ರದೇಶದ ಕೃಷ್ಣಪುರದ ಬಳಿಯ ತೋಟಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಇದರಿಂದ ಜನರು ದಿನನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಬಿಸಿಲನ್ನೂ ಲೆಕ್ಕಿಸದೇ ಮುಂಜಾನೆ ಕ್ಯೂನಲ್ಲಿ ನಿಲ್ಲಬೇಕಾಗಿದೆ. ಇದರಿಂದ ಕೂಲಿ ಕಾರ್ಮಿಕರಿಗೆ ಒಂದು ದಿನ ಕೂಲಿ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಆಹಾರ ನಿರೀಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.