ಸಮರ್ಪಕ ಪಡಿತರ ವಿತರಿಸದಿರುವುನ್ನು ಖಂಡಿಸಿ ಮಂಗಲ ಗ್ರಾಮದಲ್ಲಿ ಪಡಿತರದಾರರು ನ್ಯಾಯಬೆಲೆ ಅಂಗಡಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದರು.
ಹನೂರು: ಸಮರ್ಪಕವಾಗಿ ಪಡಿತರ ವಿತರಿಸದಿರುವುದನ್ನು ಖಂಡಿಸಿ ಸೋಮವಾರ ತಾಲೂಕಿನ ಮಂಗಲ ಗ್ರಾಮದ ಶ್ರೀ ವೆಂಕಟೇಶ್ವರ ನ್ಯಾಯಬೆಲೆ ಅಂಗಡಿಯ ಮುಂಭಾಗ ಪಡಿತರ ಚೀಟಿದಾರರು ದಿಢೀರ್ ಪ್ರತಿಭಟನೆ ನಡೆಸಿದರು.
ಈ ನ್ಯಾಯಬೆಲೆ ಅಂಗಡಿಯಲ್ಲಿ ಮಾಲೀಕ ರಾಮಚಂದ್ರ ಎಂಬುವರು ಕೆಲವರಿಗೆ ಬಯೋಮೆಟ್ರಿಕ್ ಪಡೆದು 2 ತಿಂಗಳ ಪಡಿತರವನ್ನು ವಿತರಿಸಿದ್ದರು. ಆದರೆ ಬೆಳಗ್ಗೆ ಅಂಗಡಿಗೆ ಆಗಮಿಸಿದ್ದ ಗ್ರಾಹಕರಿಗೆ 2 ತಿಂಗಳ ಪಡಿತರವನ್ನು ವಿತರಿಸಲು ನಿರಾಕರಿಸಿದರು. ಇದನ್ನು ಪ್ರಶ್ನಿಸಿದಾಗ ಮಾಲೀಕ ಹಾಗೂ ಗ್ರಾಹಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಇದನ್ನು ಖಂಡಿಸಿ ಮಹಿಳೆಯರು ಹಾಗೂ ಗ್ರಾಮಸ್ಥರು ಡಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪಡಿತರ ಚೀಟಿದಾರರು ಮಾತನಾಡಿ, ಈ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳು ಪಡಿತರವನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ. ತಿಂಗಳ ಕೊನೆಯಲ್ಲಿ 5 ದಿನ ಮಾತ್ರ ಪಡಿತರವನ್ನು ವಿತರಿಸಲಾಗುತ್ತಿದೆ. ಇದರಿಂದ ಕೂಲಿ ಕೆಲಸವನ್ನು ಬಿಟ್ಟು ಪಡಿತರ ಪಡೆಯಲು ಆಗಮಿಸಿದರೂ ರಾಮಚಂದ್ರ ಅವರು ನೆಟ್‌ವರ್ಕ್ ಸಮಸ್ಯೆಯ ನೆಪವೊಡ್ಡಿ ಅಲೆದಾಡಿಸುತ್ತಾರೆ. ಜನರ ಜತೆ ಅನುಚಿತವಾಗಿ ವರ್ತಿಸುತ್ತಾರೆ. ಅಂತ್ಯೋದಯ ಕಾರ್ಡ್‌ದಾರರಿಗೆ ನೀಡಲಾಗುವ ಪಡಿತರದಲ್ಲಿ ವಂಚಿಸಲಾಗುತ್ತಿದೆ. ಸೀಮೆಎಣ್ಣೆಯಂತೂ ವಿತರಿಸುವುದೆ ಇಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಇಲ್ಲಸಲ್ಲದ ಕಾರಣ ನೀಡುತ್ತಾರೆ. ಈಗಿರುವಾಗ ಈ ಬಾರಿ ಕೆಲವರಿಗೆ 2 ತಿಂಗಳ ಪಡಿತರವನ್ನು ವಿತರಿಸಿ ಉಳಿದವರಿಗೆ ನೀಡದಿರುವುದು ಎಷ್ಟರ ಮಟ್ಟಿಗೆ ಸರಿ? ಹಾಗಾಗಿ ಈ ಅಂಗಡಿಯಲ್ಲಿ ಪ್ರತಿ ತಿಂಗಳು ಪಡಿತರ ವಿತರಣೆಯದ್ದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಈ ನ್ಯಾಯಬೆಲೆ ಅಂಗಡಿಯನ್ನು ರದ್ದುಗೊಳಿಸಿ ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆದು ಸಮರ್ಪಕ ಪಡಿತರ ವಿತರಿಸುವಂತಾಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕಾಗಮಿಸಿದ ತಾಲೂಕು ಆಹಾರ ನಿರೀಕ್ಷಕ ವಿಷ್ಣುಮೂರ್ತಿ ಅವರು ಜನರ ಸಮಸ್ಯೆಯನ್ನು ಆಲಿಸಿದರು. ಅಂಗಡಿ ಮಾಲೀಕರಿಂದ ಲೋಪವಾಗಿರುವ ಬಗ್ಗೆ ಮಾಹಿತಿ ಪಡೆದರು. ಈ ಬಗ್ಗೆ ಉಪ ನಿರ್ದೇಶಕರಿಗೆ ಮಾಹಿತಿ ತಿಳಿಸಿದರು. ಇವರ ಸೂಚನೆ ಮೇರೆಗೆ ಪಡಿತರ ವಿತರಿಸುವುದನ್ನು ನಿಲ್ಲಿಸುವಂತೆ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಗ್ರಾಮಸ್ಥರಿಗೆ ಸದ್ಯದ ಮಟ್ಟಿಗೆ ಇಲಾಖೆ ವತಿಯಿಂದಲೇ ಪಡಿತರವನ್ನು ವಿತರಿಸಲು ವ್ಯವಸ್ಥೆ ಮಾಡಲಾಗುವುದು. ಈ ನ್ಯಾಯಬೆಲೆ ಅಂಗಡಿ ಸೂಕ್ತ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ ಬಳಿಕ ಪಡಿತರದಾರರು ಪ್ರತಿಭಟನೆ ಕೈಬಿಟ್ಟರು.