ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದ ಡೇರಿಯಲ್ಲಿ ನಿರ್ಮಿಸಿದ ಸಭಾಭವನವನ್ನು ಗಣೇಶ್ ಪ್ರಸಾದ್ ಉದ್ಘಾಟಿಸಿದರು. ಶೀಲಾಪುಟ್ಟರಂಗಶೆಟ್ಟಿ ನಂಜುಂಡಸ್ವಾಮಿ, ಎಚ್.ಎಸ್.ನಂಜುಂಡಪ್ರಸಾದ್, ಎಂ.ಪಿ.ಸುನಿಲ್, ಕೆ.ರಾಜಕುಮಾರ್, ಚಂದ್ರಶೇಖರ್, ಕುಮಾರಸ್ವಾಮಿ ಇದ್ದರು.
- ಶಾಸಕ ಎಚ್.ಎಂ.ಗಣೇಶಪ್ರಸಾದ್ ಭರವಸೆ
ಗುಂಡ್ಲುಪೇಟೆ: ಮುಂದಿನ ದಿನಗಳಲ್ಲಿ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸಭಾಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಚಾಮುಲ್ ಹಾಗೂ ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಬನ್ನಿತಾಳಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಇತ್ತೀಚೆಗೆ ನಿರ್ಮಿಸಿದ್ದ ಸಭಾ ಭವನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಸುಮಾರು 130ಕ್ಕೂ ಹೆಚ್ಚಿನ ಡೇರಿಗಳಲ್ಲಿ ಸಭಾ ಭವನಗಳಿದ್ದು ಸಂಘದ ಚಟುವಟಿಕೆ ಹಾಗೂ ಅಭಿವೃದ್ಧಿಗೆ ಪೂರಕವಾಗಿವೆ. ಸಂಘಗಳು ತಮ್ಮ ಲಾಭ ಹಾಗೂ ಉಳಿತಾಯದಿಂದ ಸಭಾಭವನಗಳಲ್ಲಿ ನಿರ್ಮಿಸಿ ವಹಿವಾಟನ್ನು ಹೆಚ್ಚಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಉಳಿದ ಸಂಘಗಳಲ್ಲಿಯೂ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯ ಹಾಲು ಉತ್ಪಾದಕರು ಹಾಗೂ ರೈತರ ಹಿತಾಸಕ್ತಿ ಕಾಪಾಡಲು ದಿ.ಎಚ್.ಎಸ್.ಮಹದೇವಪ್ರಸಾದ್ ಚಾಮುಲ್ ಆರಂಭಿಸಿದರು. ಸ್ಥಳೀಯ ಹಾಲು ಉತ್ಪಾದಕರ ಶ್ರಮದಿಂದ ಒಕ್ಕೂಟವು ಗುಣಮಟ್ಟದ ನಂದಿನಿ ಉತ್ಪನ್ನಗಳನ್ನು ತಯಾರಿಸಿ ದೇಶ-ವಿದೇಶಗಳಲ್ಲಿ ಪೂರೈಸುವಂತಾಗಿದ್ದು ಅತ್ಯಂತ ಜನಪ್ರಿಯವಾಗಿವೆ. ಸರ್ಕಾರವೂ ಹೈನುಗಾರರಿಗೆ ನೆರವಾಗಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನ 1 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಬನ್ನಿತಾಳಪುರ ಸಂಪರ್ಕಿಸುವ ರಸ್ತೆ ನಿರ್ಮಾಣ, ಗ್ರಾಮಾಕ್ಕೆ ಕುಡಿಯುವ ನೀರು ಪೂರೈಸಲು 50 ಸಾವಿರ ಲೀಟರ್ ಸಂಗ್ರಹದ ನೀರಿನ ಟ್ಯಾಂಕ್ ನಿರ್ಮಾಣ, ಭಗೀರಥ ಸಮುದಾಯ ಭನವದ ಮುಂದುವರಿದ ಕಾಮಗಾರಿ ಮತ್ತು ಮಹದೇಶ್ವರ ದೇವಾಲಯದ ಅಭಿವೃದ್ಧಿಗೂ ಅನುದಾನ ಮಂಜೂರಾಗಿದ್ದು ಇವುಗಳಿಗೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಪ್ರಕಟಿಸಿದರು.
ಕರ್ನಾಟಕ ಹಾಲು ಒಕ್ಕೂಟದ ನಿರ್ದೇಶಕಿ ಶೀಲಾ ಪುಟ್ಟರಂಗಶೆಟ್ಟಿ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕರಾದ ಎಚ್.ಎಸ್.ನಂಜುಂಡಪ್ರಸಾದ್, ಎಂ.ಪಿ.ಸುನಿಲ್, ವ್ಯವಸ್ಥಾಪಕ ನಿರ್ದೇಶಕ ಕೆ.ರಾಜಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್, ಮಾರ್ಗ ವಿಸ್ತರಣಾಧಿಕಾರಿ ಪ್ರಕಾಶ್, ಮುಖಂಡರಾದ ರಂಜಿತಾ, ಉದಯಕುಮಾರ್, ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷ ಮಾದಶೆಟ್ಟಿ, ಶಿವಮ್ಮ, ಕಮರಶೆಟ್ಟಿ, ಮಂಗಳಮ್ಮ, ಗೌರಮ್ಮ ಸೇರಿದಂತೆ ಹಲವರು ಇದ್ದರು.