ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ವಿದ್ಯುತ್ ಪ್ರಸರಣಾ ಕೇಂದ್ರ ನಿರ್ಮಾಣ ಕಾಮಗಾರಿಗೆ ಎಚ್.ಎಂ.ಗಣೇಶ್ ಪ್ರಸಾದ್ ಭೂಮಿಪೂಜೆ ನೆರವೇರಿಸಿದರು. ಡಿ.ಎಸ್.ಸಿದ್ದಪ್ಪ, ಜಿ.ಮಡಿವಾಳಪ್ಪ, ವೈ.ಎನ್.ರಾಜಶೇಖರ್, ಶಿವಣ್ಣ, ವಿ.ಆರ್.ನಾಗಪ್ಪ, ಕೆ.ಎಂ.ಪ್ರಭುಸ್ವಾಮಿ, ರಾಜು ಕುಂದಕೆರೆ, ಚನ್ನಬಸಪ್ಪ, ಸುಬ್ರಹ್ಮಣ್ಯ, ಟಿ.ಪಿ.ನಾಗರಾಜು ಇದ್ದರು. 
ಚಾಮರಾಜನಗರ

ವಡ್ಡಗೆರೆ ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಾಣ’

ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾಹಿತಿ

ಗುಂಡ್ಲುಪೇಟೆ: ಕಾಡಂಚಿನ ಗ್ರಾಮಗಳಿಗೂ ಗುಣಮಟ್ಟದ ವಿದ್ಯುತ್ ಪೂರೈಸುವ ಸಲುವಾಗಿ ವಡ್ಡಗೆರೆ ಗ್ರಾಮದಲ್ಲಿ ನೂತನ ಉಪಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ 16 ಕೋಟಿ ರೂ. ವೆಚ್ಚದಲ್ಲಿ 66/11 ಕೆವಿ ಸಾಮರ್ಥ್ಯದ ನೂತನ ವಿದ್ಯುತ್ ಪ್ರಸರಣಾ ಘಟಕ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ದಿ.ಮಹದೇವಪ್ರಸಾದ್ ಅವಧಿಯಲ್ಲಿಯೇ ಈ ಭಾಗದ ಕಡಬೂರು, ಕುಂದಕೆರೆ, ರಾಮಯ್ಯನಪುರ, ಬೊಮ್ಮನಹಳ್ಳಿ, ಚಿರಕನಹಳ್ಳಿ, ಕರಕಲಮಾದಹಳ್ಳಿ ಮುಂತಾದ ಹಲವಾರು ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ವಿದ್ಯುತ್ ಉಪಕೇಂದ್ರ ಮಂಜೂರು ಮಾಡಿದ್ದರು. ಈ ಕೇಂದ್ರ ನಿರ್ಮಾಣಕ್ಕೆ ಸ್ಥಳ ಗುರ್ತಿಸಿದ್ದರೂ ಹಿಂದಿನ ಶಾಸಕರು ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಇದರ ನಿರ್ಮಾಣಕ್ಕೆ ಮುಂದಾಗಲಿಲ್ಲ. ಆದರೆ ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಕಂಡು ಹೊಟ್ಟೆಕಿಚ್ಚಿನಿಂದ ಟೀಕೆ ಮಾಡುತ್ತಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ನಂಬಿಕೆಯಿಂದ ತಾವು ವಿರೋಧಿಗಳ ಟೀಕೆಗಳ ಬಗ್ಗೆ ಮಾತನಾಡದೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ಸರ್ಕಾರದಿಂದ ಹಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದು ಮುಂದಿನ ತಿಂಗಳು ಆರಂಭವಾಗಲಿರುವ ಬಜೆಟ್ ಅಧಿವೇಶನಕ್ಕೂ ಮೊದಲೇ ಮತ್ತಷ್ಟು ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಮಲೆಮಹದೇಶ್ವರ ಬೆಟ್ಟದ ಧರ್ಮದರ್ಶಿ ಮಂಡಳಿಯ ಮಾಜಿ ಅಧ್ಯಕ್ಷ ಡಿ.ಎಸ್.ಸಿದ್ದಪ್ಪ, ಟಿಎಪಿಸಿಎಂಎಸ್ ಆಧ್ಯಕ್ಷ ಜಿ.ಮಡಿವಾಳಪ್ಪ, ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ವೈ.ಎನ್.ರಾಜಶೇಖರ್, ಮುಖಂಡರಾದ ಶಿವಣ್ಣ, ವಿ.ಆರ್.ನಾಗಪ್ಪ, ಕೆ.ಎಂ.ಪ್ರಭುಸ್ವಾಮಿ, ರಾಜು ಕುಂದಕೆರೆ, ಚನ್ನಬಸಪ್ಪ, ಸುಬ್ರಹ್ಮಣ್ಯ, ಟಿ.ಪಿನಾಗರಾಜು, ಸೆಸ್ಕ್ ಅಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.