ಯಳಂದೂರು ತಾಲೂಕಿನ ಆಲ್ಕೆರೆ ಅಗ್ರಹಾರ ಗ್ರಾಮದಲ್ಲಿರುವ ಶಿಥಿಲಗೊಂಡ ಅಂಗನವಾಡಿ ಕಟ್ಟಡ  
ಚಾಮರಾಜನಗರ

ಅಲ್ಕೆರೆ ಅಗ್ರಹಾರ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಗ್ರಹಣ!

ಪ್ರಮುಖ ಮುಖ್ಯಾಂಶಗಳು

  • 20 ಲಕ್ಷ ರೂ. ಅನುದಾನ ಲಭ್ಯವಿದ್ದರೂ ಬಳಕೆಯಾಗುತ್ತಿಲ್ಲ
  • ಅಧಿಕಾರಿಗಳ ನಡುವೆ ಸಮನ್ವಯ ಕೊರತೆ
ಯಳಂದೂರು: ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಎಂಬ ಗಾದೆ ಮಾತಿನಂತೆ ಸರ್ಕಾರದ 20 ಲಕ್ಷ ರೂ.ಗಳ ಅನುದಾನ ಲಭ್ಯವಿದ್ದರೂ ಅಂಗನವಾಡಿ ಕಟ್ಟಡವನ್ನು ನಿರ್ಮಿಸದೆ ಮೀನಮೇಷ ಎಣಿಸುತ್ತಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ತಾಲೂಕಿನ ಆಲ್ಕೆರೆ ಅಗ್ರಹಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಗೊಂಡು ಹಲವು ವರ್ಷ ಕಳೆದಿದ್ದು, ಇದು ಸಂಪೂರ್ಣವಾಗಿ ಶಿಥಿಲಗೊಂಡಿದೆ. ಈ ಕಟ್ಟಡವನ್ನು ನೆಲಸಮ ಮಾಡಿ ನಂತರ ನೂತನ ಕಟ್ಟಡ ನಿರ್ಮಾಣಕ್ಕೆ ಶಿಶು ಅಭಿವೃದ್ಧಿ ಕಚೇರಿ ಹಾಗೂ ಮನರೇಗಾ ಯೋಜನೆ ಸೇರಿ ಒಟ್ಟು 20 ಲಕ್ಷ ರೂ.ಗಳ ಅನುದಾನ ಲಭ್ಯವಿದೆ. ಆದರೂ ಈ ಬಗ್ಗೆ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ವಿಭಾಗ ಹಾಗೂ ತಾಲೂಕು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಹೊಂದಾಣಿಕೆ ಇಲ್ಲದೇ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಸರ್ಕಾರದ ಅನುದಾನ ಲಭ್ಯವಿದ್ದರೂ, ಇಲಾಖೆಯ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಅಂಗನವಾಡಿಗೆ ಬರುವ ಪುಟಾಣಿ ಮಕ್ಕಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳ ನಡೆಗೆ ನಾಗರಿಕರ ಕಿಡಿ: ಕಳೆದ 3 ವರ್ಷಗಳಿಂದಲೂ ಸರ್ಕಾರಿ ಶಾಲೆಯ ಕೊಠಡಿಯಲ್ಲೇ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಆದರೆ ಇದು ಕಿರಿದಾಗಿದೆ. ಅಂಗನವಾಡಿಗೆ ನೀಡಲಾಗುವ ಮಕ್ಕಳ ಆಟದ ಪರಿಕರಗಳು, ಕಲಿಕಾ ಸಾಮಗ್ರಿಗಳು, ಅಡುಗೆ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಕಷ್ಟವಾಗುತ್ತದೆ. ಇಲ್ಲೇ ಅಡುಗೆ ಮಾಡುವುದರಿಂದ ಮಕ್ಕಳ ಕಲಿಕೆಗೂ ಕಷ್ಟವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರಿಗೆ ದೂರು ನೀಡಿದರೂ ಹೊಸ ಕಟ್ಟಡ ನಿರ್ಮಾಣಕ್ಕೆ ಅಸ್ಥೆ ವಹಿಸದಿರುವ ಅಧಿಕಾರಿಗಳ ಕ್ರಮವನ್ನು ಗ್ರಾಮಸ್ಥರು ಟೀಕಿಸಿದ್ದಾರೆ. ಶೀಘ್ರದಲ್ಲೇ ಕಟ್ಟಡ ಕಾಮಗಾರಿಯನ್ನು ಆರಂಭಿಸಿ ಪೂರ್ಣಗೊಳಿಸಬೇಕು. ನಮ್ಮ ಗ್ರಾಮದ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲು ಸಹಕರಿಸಬೇಕು ಎಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ.
ತಾಲೂಕಿನ ಅಲ್ಕೆರೆ ಅಗ್ರಹಾರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನವಿದೆ. ಇದು ಟೆಂಡರ್‌ನ ಹಂತದಲ್ಲಿದೆ. ಶೀಘ್ರ ಅಧಿಕಾರಿಗಳ ಜತೆಗೆ ಚರ್ಚಿಸಿ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.
>ಜಯಶೀಲ ಸಿಡಿಪಿಒ, ಯಳಂದೂರು
ಅಲ್ಕೆರೆ ಗ್ರಾಮದ ಅಂಗನವಾಡಿ ಕೇಂದ್ರವು ಶಿಥಿಲಾವಸ್ಥೆ ತಲುಪಿ ಹಲವು ವರ್ಷಗಳೇ ಕಳೆದಿದ್ದು, ಸರ್ಕಾರಿ ಶಾಲೆ ಕೊಠಡಿಯಲ್ಲಿ ಕೇಂದ್ರ ನಡೆಯುತ್ತಿದೆ. ಹೊಸ ಕಟ್ಟಡ ನಿರ್ಮಾಣವಾದರೆ ಮಕ್ಕಳ ಕಲಿಕೆ, ಚಟುವಟಿಕೆ ಹಾಗೂ ಅಡುಗೆ ತಯಾರಿ, ಊಟ ಮಾಡಲು ಅನುಕೂಲವಾಗಲಿದೆ. ಅಧಿಕಾರಿಗಳು ಗಮನ ನೀಡಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕಾಗಿದೆ.
>ಮೀನಾಕ್ಷಿ ಅಂಗನವಾಡಿ ಕಾರ್ಯಕರ್ತೆ, ಅಲ್ಕೆರೆ ಅಗ್ರಹಾರ