ಚಂಗವಾಡಿ ಬಳಿ ಬರಹಳ್ಳ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್.ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಗುರುಮಲ್ಲಪ್ಪ, ಉದ್ದನೂರು ಪ್ರಸಾದ್, ರಾಜುಗೌಡ, ತಿರುಪತಿ, ಮಂಜೇಶ್ ಇತರರು ಇದ್ದರು.  
ಚಾಮರಾಜನಗರ

ಚಂಗವಾಡಿ ಬಳಿ 3 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್.ಮಂಜುನಾಥ್ ಹೇಳಿಕೆ
  • ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಹನೂರು:

ಬರಹಳ್ಳದ ಸೇತುವೆ ನಿರ್ಮಾಣದಿಂದ ಈ ಭಾಗದ ಜನರು ಎದುರಿಸುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಗಲಿದೆ. ಜವಾಬ್ದಾರಿ ಹೊತ್ತವರು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.

ಪಟ್ಟಣದಿಂದ ಮಣಗಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಚಂಗವಾಡಿ ಬಳಿ ಪಿಡಬ್ಲ್ಯುಡಿ ಇಲಾಖೆ 3 ಕೋಟಿ ರೂ.ಅನುದಾನದಲ್ಲಿ ಬರಹಳ್ಳ ಸೇತುವೆ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ಮಾರ್ಗವು ಮಣಗಳ್ಳಿ, ಬಂಡಳ್ಳಿ, ಶಾಗ್ಯ, ಚಂಗವಾಡಿ, ತೊಮಿಯಾರ್‌ಪಾಳ್ಯ ಹಾಗೂ ಈ ಭಾಗದ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ನಿತ್ಯ ನೂರಾರು ವಾಹನಗಳು, ಸಾರ್ವಜನಿಕರು ಸಂಚರಿಸುತ್ತಾರೆ. ಹಲವು ದಶಕದ ಹಿಂದೆ ನಿರ್ಮಿಸಿದ್ದ ಮುಳುಗು ಸೇತುವೆ ಸಂಪೂರ್ಣ ಹಾಳಾಗಿತ್ತು. ಇದರಿಂದ ಮಳೆ ಬಂದ ವೇಳೆ ಯಥೇಚ್ಛವಾದ ನೀರು ಸೇತುವೆ ಮೇಲೆ ಗಂಟೆಗಟ್ಟಲೇ ಹರಿಯುತ್ತಿತ್ತು. ಪರಿಣಾಮ ಸಾರ್ವಜನಿಕರು ಸಂಚರಿಸಲು ಸಮಸ್ಯೆಯಾಗಿದೆ ಎಂದು ಹೇಳಿದರು.
ತೀವ್ರ ಹಾಳಾಗಿದ್ದ ಈ ಮಾರ್ಗದ ರಸ್ತೆ ಹಾಗೂ ಸೇತುವೆ ನಿರ್ಮಿಸಬೇಕೆನ್ನುವುದು ಈ ಭಾಗದ ಜನರ ಹಲವು ವರ್ಷದ ಬೇಡಿಕೆ. ಈಗಾಗಲೇ ಬಂಡಳ್ಳಿ- ಹನೂರು ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ. ಸೇತುವೆ ನಿರ್ಮಾಣ ಶೀಘ್ರ ಮುಕ್ತಾಯವಾಗಲಿದ್ದು, ಈ ಭಾಗದ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಚನ್ನಾಲಿಂಗನಹಳ್ಳಿ ಗ್ರಾಮದಲ್ಲಿ 17.10 ಲಕ್ಷ ರೂ.ವೆಚ್ಚದಲ್ಲಿ ಕನಕ ಸಮುದಾಯ ಭವನ ಹಾಗೂ ಕಣ್ಣೂರು ಗ್ರಾಮದಲ್ಲಿ 16.60 ಲಕ್ಷ ರೂ.ವೆಚ್ಚದಲ್ಲಿ ಶ್ರೀ ಬೀರೇಶ್ವರ ದೇಗುಲ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಪಿಡಬ್ಲ್ಯುಡಿ ಎಇಇ ಕುಮಾರ್, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಹಾಲಿ ಸದಸ್ಯ ಉದ್ದನೂರು ಪ್ರಸಾದ್, ಮುಖಂಡರಾದ ರಾಮೇಗೌಡ, ಮಲ್ಲಣ್ಣ, ವೆಂಕಟೇಶ್, ರಾಚಪ್ಪ, ಕೆಂಚೇಗೌಡ, ರಾಜುಗೌಡ, ಜೆಸ್ಸಿಂಪಾಷ, ತಿರುಪತಿ, ಮಂಜೇಶ್, ಜಗನ್ನಾಥ್, ಮಲ್ಲೇಗೌಡ ಇತರರು ಇದ್ದರು.