ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಜೀವ ವೈವಿಧ್ಯ ಹಾಗೂ ಪರಿಸರ ಸಂರಕ್ಷಣಾ ಕಾರ್ಯಕ್ರಮದಲ್ಲಿ ಆರ್.ಕೆ.ಮಧು ಮಾತನಾಡಿದರು. ದೊಡ್ಡಬಸವಯ್ಯ ಹಾಗೂ ಇತರರು ಇದ್ದರು. 
ಚಾಮರಾಜನಗರ

ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಸಂರಕ್ಷಣೆ ಅವಶ್ಯ

ಗುಂಡ್ಲುಪೇಟೆ : ಪರಿಸರ ಸಮತೋಲನಕ್ಕೆ ಜೀವವೈವಿಧ್ಯವನ್ನು ಉಳಿಸಬೇಕಾದ ಅಗತ್ಯ ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಹೇಳಿದರು.
ತಾಲೂಕಿನ ಬನ್ನಿತಾಳಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಜೀವ ವೈವಿಧ್ಯ ಹಾಗೂ ಪರಿಸರ ಸಂರಕ್ಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನಿಂದಲೂ ಭೂಮಿಯಲ್ಲಿ ದೊಡ್ಡ ಪ್ರಮಾಣದ ಅರಣ್ಯವಿದ್ದು, ಎಲ್ಲ ಜೀವಿಗಳಿಗೂ ಆಶ್ರಯವಾಗಿತ್ತು. ಆದರೆ ಆಧುನಿಕತೆಯ ಭರಾಟೆಯಲ್ಲಿ ಅರಣ್ಯ ನಾಶದಿಂದ ವಿವಿಧ ವೈವಿಧ್ಯಮಯ ವನ್ಯಜೀವಿಗಳು ವಿನಾಶದಂಚಿಗೆ ತಲುಪಿವೆ. ಇದರಿಂದ ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರವು ವಿನಾಶದಂಚಿನಲ್ಲಿರುವ ವನ್ಯಜೀವಿಗಳ ಸಂರಕ್ಷಣೆಗೆ ಹಲವು ವನ್ಯಜೀವಿ ಧಾಮಗಳನ್ನು ಆರಂಭಿಸಿದೆ. ಕರ್ನಾಟಕ ಹಲವು ವಿಶೇಷ ವನ್ಯಜೀವಿ ಧಾಮಕ್ಕೆ ಹೆಸರು ವಾಸಿಯಾಗಿದ್ದು, ಸಿಂಗಲೀಕಕ್ಕೆ ಸೋಮೇಶ್ವರ ವನ್ಯಜೀವಿ ಧಾಮವಿದ್ದರೆ ರಣಹದ್ದುಗಳಿಗಾಗಿ ರಾಮದೇವರ ಬೆಟ್ಟ, ಕರಡಿಗಳಿಗಾಗಿ ಧರೋಜಿ ವಿಶೇಷವಾಗಿದ್ದು ಪರಿಸರ ಸಮತೋಲನಕ್ಕೆ ಕೊಡುಗೆ ನೀಡಿವೆ ಎಂದರು.
ಪರಿಸರ ನಾಶಕ್ಕೆ ಕಾರಣವಾಗುವ ಸುರಂಗಮಾರ್ಗ ಕಾಡಿನ ಅವನತಿಗೆ ಮಾನವ ಪ್ರಾಣಿ ಸಂಘರ್ಷಕ್ಕೆ ಕಾರಣವಾಗುವ ಆತಂಕ ವ್ಯಕ್ತಪಡಿಸಿ ತಾವೇ ಸೆರೆ ಹಿಡಿದ ವನ್ಯಜೀವಿ ಪಾರದರ್ಶಿಕೆ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ದೊಡ್ಡಬಸವಯ್ಯ, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.