ತೊಮಿಯಾರ್ ಪಾಳ್ಯ ಚರ್ಚ್‌ಗೆ ತಮಿಳುನಾಡಿನ ಪಿಎಂಕೆ ಪಕ್ಷದ ಮಾಜಿ ಶಾಸಕರ ತಂಡ ಭೇಟಿ ನೀಡಿ ಸಾಂತ್ವನ ಹೇಳಿತು. 
ಚಾಮರಾಜನಗರ

ಮೃತರ ಕುಟುಂಬಸ್ಥರಿಗೆ ಸಾಂತ್ವನ

ಹನೂರು:

ಇತ್ತೀಚೆಗೆ ಶೂಟೌಟ್ ಪ್ರಕರಣದಲ್ಲಿ ಬಲಿಯಾದ ಮೂವರ ಮನೆಗಳಿಗೆ ಮಂಗಳವಾರ ತಮಿಳುನಾಡಿನ ಪಾಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷದ ಮಾಜಿ ಶಾಸಕರ ತಂಡ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿತು.

ಪಕ್ಷದ ಧರ್ಮಪುರಿ ಮಾಜಿ ಶಾಸಕ ವೆಂಕಟೇಶನ್, ವೇಲುಸ್ವಾಮಿ, ಪಕ್ಷದ ರಾಜ್ಯ ಕಾರ್ಯದರ್ಶಿ ಷಣ್ಮುಗಂ, ಧರ್ಮಪುರಿ ಜಿಲ್ಲಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಅರಸಾಂಗಮ್ ಹಾಗೂ ಯೂತ್ ಘಟಕದ ಅಧ್ಯಕ್ಷ ಶರವಣನ್ ತಂಡ ತೊಮಿಯಾರ್ ಪಾಳ್ಯ ಸಮೀಪದ ಲಾಸರ್ ದೊಡ್ಡಿಯ ಕುಮಾರ್, ಮರಿಯಮಂಗಲದ ಅಂಥೋನಿ ಸ್ವಾಮಿ ಹಾಗೂ ಜಗನ್ನಾಥದೊಡ್ಡಿಯ ಜಾನ್ ರೋಸ್ ಪೀಟರ್ ಅವರ ಮನೆಗೆ ತೆರಳಿ ಕುಟುಂಬಸ್ಥರಿಂದ ಘಟನೆ ಬಗ್ಗೆ ಮಾಹಿತಿ ಪಡೆದು, ಭಾವಚಿತ್ರಕ್ಕೆ ಹಾರ ಹಾಕಿ ನಮನ ಸಲ್ಲಿಸಿತು.
ಅರಣ್ಯ ಇಲಾಖೆಯ ಸಿಬ್ಬಂದಿ ನಮ್ಮ ಮನೆಯವರನ್ನು ಬೇಟೆಗಾರರೆಂದು ಬಿಂಬಿಸಿ ಗುಂಡಿಕ್ಕಿ ಕೊಲೈಗೈದಿದ್ದಾರೆ. ಇದರಿಂದ ನಮ್ಮ ಜೀವನ ಹಾಳಾಗಿದ್ದು, ಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರು ಕಣ್ಣೀರು ಹಾಕಿದರು.
1 ಕೋಟಿ ಪರಿಹಾರ ನೀಡಲಿ
ಇದಕ್ಕೂ ಮುನ್ನ ತೊಮಿಯಾರ್ ಪಾಳ್ಯ ಚರ್ಚ್‌ಗೆ ಭೇಟಿ ನೀಡಿದ ತಂಡ, ಫಾದರ್ ಚಾರ್ಲಿಸ್ ಅವರಿಂದ ಮಾಹಿತಿ ಪಡೆದರು. ಈ ವೇಳೆ ಸುದ್ದಿಗಾರರೊಂದಿಗೆ ಮಾಜಿ ಶಾಸಕ ವೆಂಕಟೇಶನ್ ಮಾತನಾಡಿ, ಅರಣ್ಯ ಇಲಾಖೆಯ ಶೂಟೌಟ್‌ನಿಂದ ಮೂವರು ಬಲಿಯಾಗಿರುವುದು ದುಃಖದ ಸಂಗತಿ. ಅವರ ಕುಟುಂಬದ ಸ್ಥಿತಿಗತಿ ಬಗ್ಗೆ ಪ್ರತ್ಯಕ್ಷವಾಗಿ ತಿಳಿದು ವರದಿ ನೀಡುವಂತೆ ಪಕ್ಷದ ಅಧ್ಯಕ್ಷ ಅನ್ಬುಮಣಿ ರಾಮದಾಸ್ ಸೂಚಿಸಿದ್ದಾರೆ ಎಂದ ಅವರು, ಮೂವರು ಕುಟುಂಬಗಳಿಗೆ ತಮಿಳುನಾಡು ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಕರ್ನಾಟಕ ಸರ್ಕಾರ ನೀಡಿರುವ 5 ಲಕ್ಷ ರೂ. ಸಾಲುವುದಿಲ್ಲ. ಹಾಗಾಗಿ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಎನ್ನುವುದು ನಮ್ಮ ಒತ್ತಾಯ ಎಂದರು.

ಮಾಜಿ ಶಾಸಕ ವೇಲುಸ್ವಾಮಿ ಮಾತನಾಡಿ, ತಮಿಳುನಾಡಿನ ಹೊಸೂರಿನಿಂದ ಕೊಯಮತ್ತೂರಿನವರೆಗೆ ಅರಣ್ಯ ಪ್ರದೇಶದ ಅಂಚಿನಲ್ಲಿ ಜನರು ಬದುಕುತ್ತಿದ್ದಾರೆ. ಆದರೆ, ಇಲ್ಲಿ ನಡೆದಂತಹ ಘಟನೆ ಈವರೆಗೂ ನಡೆದಿಲ್ಲ. ಕಾಡು ಪ್ರಾಣಿಗಳ ಬೇಟೆಯಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕು. ಯಾರಿಗೂ ಜೀವ ತೆಗೆಯುವ ಹಕ್ಕಿಲ್ಲ. ಘಟನೆ ಸಂಬಂಧ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ತಿಳಿದಿದ್ದೇವೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ನರೇಂದ್ರ ಪುತ್ರ ನವನೀತ್‌ಗೌಡ, ಮುಖಂಡರಾದ ಮಣಿ, ಮಂಜೇಶ್, ಜಸ್ಸೀಂಪಾಷ, ಆನಂದ್, ಶ್ರೀಕಂಠ ಇತರರಿದ್ದರು.

ಫೋಟೋ
18 ಹನೂರು 1 ಲಾಸರ್‌ದೊಡ್ಡಿಯ ಮೃತ ಕುಮಾರ್ ಅವರ ಮನೆಗೆ ತಮಿಳುನಾಡು ಪಿಎಂಕೆ ಪಕ್ಷದ ಮಾಜಿ ಶಾಸಕರ ತಂಡ ಭೇಟಿ ನೀಡಿ, ಕುಟುಂಬ ಸದಸ್ಯಗೆ ಸಾಂತ್ವನ ಹೇಳಿದರು. ವೆಂಕಟೇಶನ್, ವೇಲುಸ್ವಾಮಿ, ಅರಸಾಂಗಮ್, ಮಂಜುನಾಥ್ ಇತರರಿದ್ದರು.