ಚಾಮರಾಜನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಸದಸ್ಯರು ದೂರು ನೀಡಿದರು. ಪ್ರವೀಣ್ ನಾಯಕ್, ಸೂರ್ಯಕುಮಾರ್, ಆನಂದ್ ಭಗೀರಥ, ಶಿವುವಿರಾಟ್, ಕೋಡಿಉಗನೆ ಮಂಜುನಾಥ್, ನಟರಾಜು, ಕೂಸಣ್ಣ ಇತರರು ಹಾಜರಿದ್ದರು.
- ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ
- ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಯುವ ಮೋರ್ಚಾದ ನಗರ ಘಟಕದಿಂದ ದೂರು
ಚಾಮರಾಜನಗರ : ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಎಫ್‌ಐಆರ್ ದಾಖಲಿಸಿ, ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾದ ನಗರ ಘಟಕದಿಂದ ಸೋಮವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು.
ಚಾಮರಾಜನಗರ ಬಿಜೆಪಿ ನಗರ ಮಂಡಲ ಯುವ ಮೋರ್ಚಾದ ಅಧ್ಯಕ್ಷ ಪ್ರವೀಣ್ ನಾಯಕ ಹಾಗೂ ಮುಖಂಡರು ಪಟ್ಟಣ ಪೊಲೀಸ್ ಠಾಣೆಗೆ ಆಗಮಿಸಿ ಇನ್ಸ್‌ಪೆಕ್ಟರ್ ಜಗದೀಶ ಅವರಿಗೆ ನೀಡಿ ದೂರು ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಪ್ರವೀಣ್ ನಾಯಕ್ ಮಾತನಾಡಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ಧ ಆಕ್ಷೇಪಾರ್ಹ ಪದವನ್ನು ಬಳಕೆ ಮಾಡಿರುವುದು ಖಂಡನೀಯ. ಆರ್‌ಎಸ್‌ಎಸ್, ಬಿಜೆಪಿ ವಿಷ ಸರ್ಪದಂತೆ ಇವೆ. ಮುಸ್ಲಿಂ ಸಮುದಾಯದ ವಿರುದ್ದ ಇದೆ. ಹೀಗಾಗಿ ತಾವೆಲ್ಲರೂ ಅದನ್ನು ಕೊಲ್ಲದಿದ್ದರೆ ಬದುಕುವುದಿಲ್ಲ ಎಂದು ಮುಸಲ್ಮಾನರಿಗೆ ಹೇಳುವ ಮೂಲಕ ದ್ವೇಷ ಭಾವನೆಯನ್ನು ಬಿತ್ತಿದ್ದಾರೆ ಎಂದರು.
ಇಂಥ ಪ್ರಚೋದನಕಾರಿ ಹೇಳಿಕೆ ಸಮಾಜದಲ್ಲಿ ಬೆಂಕಿ ಹಚ್ಚಿ ಅಶಾಂತಿ ಉಂಟು ಮಾಡುವಂತಿದೆ. ಇವರ ಪ್ರಚೋದನಕಾರಿ ಹೇಳಿಕೆ ಸಂವಿಧಾನದ ವಿರುದ್ಧವಾಗಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಎಐಸಿಸಿ ಅಧ್ಯಕ್ಷರು ನೀಡಿದ ಹೇಳಿಕೆ ದೇಶಾದ್ಯಂತ ಇರುವ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಅಪಾಯವೊಡ್ಡಲಿದೆ. ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ, ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್, ಮುಖಂಡರಾದ ಕೋಡಿಉಗನೆ ಮಂಜುನಾಥ್, ನಟರಾಜು, ಕೂಸಣ್ಣ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಶಿವಣ್ಣ, ಮೂಡಹಳ್ಳಿ ಮೂರ್ತಿ, ಹೇಮಂತ್, ಶುಭೋದಯ ಸಿದ್ದರಾಜು ಇತರರು ಇದ್ದರು.