ಚಾಮರಾಜನಗರ ತಾಲೂಕಿನ ಅಟ್ಟುಗುಳಿಪುರದಲ್ಲಿ ಕಾಣಿಸಿಕೊಂಡಿದ್ದ ನಾಗರಹಾವು 
ಚಾಮರಾಜನಗರ

ಹಾವು ಕಡಿತದ ಸಾವಿಗೆ ಹೆಚ್ಚಳವಾಗದ ಪರಿಹಾರ

ಪ್ರಮುಖ ಮುಖ್ಯಾಂಶಗಳು

  • 2 ಲಕ್ಷ ರೂ. ಪರಿಹಾರವನ್ನು 20 ಲಕ್ಷ ರೂ.ಗಳಿಗೆ ಏರಿಸಲು ಒತ್ತಾಯ
  • ಕೃಷಿ ಕೆಲಸದ ಹೊರತು ಮೃತಪಟ್ಟರೆ ಸಿಗದು ಸಹಾಯ
ಚಾಮರಾಜನಗರ: ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು, ಕೂಲಿಕಾರರು ಹಾವು ಕಚ್ಚಿ ಮೃತಪಟ್ಟರೆ ಇವರ ಕುಟುಂಬಕ್ಕೆ ನೀಡುವ ಪರಿಹಾರ ಧನ ಹೆಚ್ಚಳವಾಗಬೇಕಾಗಿದೆ.
ರಾಜ್ಯಸರ್ಕಾರ 2018ಕ್ಕೂ ಮೊದಲು ಮೃತರ ಕುಟುಂಬಸ್ಥರಿಗೆ 1 ಲಕ್ಷ ರೂ. ಪರಿಹಾರ ನೀಡುತ್ತಿತ್ತು. ಆದರೆ 2018-19ನೇ ಸಾಲಿನ ಆಯವ್ಯಯದಲ್ಲಿ ಪರಿಹಾರ ಧನವನ್ನು 1 ಲಕ್ಷ ಬದಲು 2 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿ ಮಂಜೂರಾತಿ ಮಾಡಲಾಯಿತು. ಆದರೆ ಈ ಸಹಾಯಧನವೂ ಸಾಲುವುದಿಲ್ಲವೆಂದು ರೈತರು ಹೇಳುತ್ತಿದ್ದು, ವನ್ಯಜೀವಿಗಳ ದಾಳಿಯಿಂದ ರೈತರು ಸತ್ತರೆ ನೀಡುವ 20 ಲಕ್ಷ ರೂ.ಪರಿಹಾರವನ್ನು ಹಾವು ಕಚ್ಚಿ ಸತ್ತಾಗಲೂ ನೀಡಬೇಕೆಂದು ಅನ್ನದಾತರು ಆಗ್ರಹಿಸುತ್ತಿದ್ದಾರೆ.
13 ರೈತರ ಸಾವು: ಭಾಗಶಃ ಅರಣ್ಯಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಹಾವು ಕಡಿತ ಪ್ರಕರಣದಿಂದ ಜನರು ಸಾಯುತ್ತಿದ್ದಾರೆ. ಜಮೀನುಗಳ ಪಕ್ಕದಲ್ಲೇ ಕಾಡು, ಬೆಟ್ಟ, ಗುಡ್ಡಗಳಿವೆ. ಈ ಪ್ರದೇಶಗಳು ವಿಷಜಂತುಗಳ ಆವಾಸ ಸ್ಥಳವಾಗಿವೆ. ಕೆಲವೊಮ್ಮೆ ಜಮೀನುಗಳಿಗಿರಲಿ, ಮನೆಗಳಿಗೇ ಹಾವುಗಳು ನುಗ್ಗಿ ಜೀವ ಭಯ ಸೃಷ್ಟಿಸಿರುವ ಉದಾಹರಣೆಗಳಿವೆ. ಜಮೀನುಗಳಲ್ಲಿ ಕೆಲಸ ಮಾಡುವಾಗಲಂತೂ ರೈತರಿಗೆ ಹಾವು ಕಚ್ಚುತ್ತಿವೆ. ಜಿಲ್ಲಾ ಕೃಷಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2024-25ನೇ ಸಾಲಿನಲ್ಲಿ 7 ರೈತರು ಕೃಷಿ ಚಟುವಟಿಕೆ ಮಾಡುವ ವೇಳೆ ಹಾವು ಕಚ್ಚಿ ಮೃತಪಟ್ಟರು. 2025-26ನೇ ಸಾಲಿನಲ್ಲಿ 6 ರೈತರು ಹಾವು ಕಚ್ಚಿ ನಿಧನರಾದರು. ಇವರಿಗೆ ರಾಜ್ಯ ಸರ್ಕಾರದಿಂದ 2 ಲಕ್ಷ ರೂ.ಪರಿಹಾರ ನೀಡಲಾಗಿದೆ. ಹಾವು ಕಚ್ಚಿ ಮೃತಪಟ್ಟ ಪ್ರಕರಣಗಳನ್ನು ರಾಜ್ಯ ಸರ್ಕಾರ ಆಕಸ್ಮಿಕ ಸಾವು ಎಂದು ಪರಿಗಣಿಸುತ್ತದೆ. ಆಯಾ ಜಿಲ್ಲೆಗಳ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯ ಸಮಿತಿಯು ಪ್ರಕರಣದಲ್ಲಿ ಪರಿಹಾರ ನೀಡಲು ಆದೇಶ ಹೊರಡಿಸುತ್ತದೆ. ಮೃತರು ಕೃಷಿ ಚಟುವಟಿಕೆಯಲ್ಲಿ ತೊಡಗಿರಬೇಕು. ಈ ವೇಳೆ ಹಾವು ಕಚ್ಚಿರುವುದು ಸೇರಿದಂತೆ ವಿವಿಧ ಕ್ರಮಗಳ ಆಧಾರದ ಮೇಲೆ ಪರಿಹಾರ ನೀಡಲು ಆದೇಶ ಮಾಡಲಾಗುತ್ತದೆ.
ಸದನದಲ್ಲಿ ಧ್ವನಿ ಎತ್ತಿದ್ದ ಶಾಸಕ: ಹಾವು ಕಚ್ಚಿ ಸಾವಿಗೀಡಾದ ರೈತರಿಗೆ 20 ಲಕ್ಷ ರೂ. ಪರಿಹಾರ ನೀಡಬೇಕೆಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಧ್ವನಿ ಎತ್ತಿದ್ದರು. ಪ್ರಾಣಿಗಳ ಹತ್ಯೆ ಮಾಡಿದರೆ ಅರಣ್ಯ ಇಲಾಖೆ ಪ್ರಕರಣ ದಾಖಲು ಮಾಡುತ್ತದೆ. ಅದೇ ರೀತಿ ಹಾವುಗಳಿಂದ ಮನುಷ್ಯರಿಗೆ ತೊಂದರೆಯಾದರೆ ಅವರ ಕುಟುಂಬಕ್ಕೂ ಪರಿಹಾರ ನೀಡಬೇಕು. ಆರ್‌ಟಿಸಿ ಇಲ್ಲದರು, ಕುರಿ ಕಾಯುವವರಿಗೆ ಹಾವು ಕಚ್ಚಿ ಸತ್ತರೆ 20 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಅರಣ್ಯ ಸಚಿವರಾಗಿದ್ದ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿ, ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡುವ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದರು. ಬಳಿಕ ಮುಖ್ಯಮಂತ್ರಿ ಬದಲಾವಣೆಯ ಪ್ರಸಂಗ ಎದುರಾಯಿತು. ಇದೀಗ ಸಚಿವ ಸಂಪುಟ ವಿಸ್ತರಣೆಯ ಬೆಳವಣಿಗೆ ನಡೆಯುತ್ತಿದೆ. ಈ ರಾಜಕೀಯ ಬೆಳವಣಿಗೆಗಳ ನಡುವೆ ಹಾವು ಕಚ್ಚಿ ಸಾಯುತ್ತಿರುವ ರೈತ ಕುಟುಂಬಕ್ಕೆ ಒತ್ತಾಯ ಮಾಡುತ್ತಿರುವಷ್ಟು ಪರಿಹಾರ ದೊರೆಯದೆ ಉಳಿದಿರುವುದು ಸಮಸ್ಯೆಯಾಗಿಯೇ ಉಳಿದಿದೆ.
ಇತರರಿಗೆ 2 ಲಕ್ಷ ರೂ. ಪರಿಹಾರವೂ ಇಲ್ಲ:
ಕೃಷಿ ಕೆಲಸದಲ್ಲಿ ಭಾಗಿಯಾಗಿರದೆ ಇದ್ದವರಿಗೆ ಹಾವು ಕಚ್ಚಿ ಮೃತಪಟ್ಟರೆ 2 ಲಕ್ಷ ರೂ. ಪರಿಹಾರವೂ ದೊರೆಯುವುದಿಲ್ಲ. ಇದಕ್ಕೆ ಕೃಷಿಕರು ಮತ್ತು ಇತರರು ಎಂದು ವಿಂಗಡಣೆ ಮಾಡಿರುವುದೇ ಕಾರಣವಾಗಿದೆ. ರೈತರು ಜಮೀನುಗಳಲ್ಲಿ ಹಾವು ಕಚ್ಚಿ ಸತ್ತರೆ ದೊರೆಯುವ ಪರಿಹಾರ, ರಸ್ತೆಗಳಲ್ಲಿ ನಡೆದುಹೋಗುತ್ತಿದ್ದಾಗ ಅವಘಡ ಸಂಭವಿಸದಿರೆ ಪರಿಹಾರ ಸಿಗದ ಸ್ಥಿತಿ ಇದೆ. ಹೀಗಾಗಿ ಎಲ್ಲರಿಗೂ ಒಂದೇ ರೀತಿಯ ಪರಿಹಾರ ನಿಡುವ ನಿಯಮ ಮಾರ್ಪಾಡು ಮಾಡುವ ಅಗತ್ಯವಿದೆ.
ಇತ್ತೀಚೆಗೆ ಮಾಹಿತಿ ಸಂಗ್ರಹ:
ಜಿಲ್ಲೆಯಲ್ಲಿ ಹಾವು ಕಡಿತದಿಂದ ಮೃತಟಪ್ಟ ಪ್ರಕರಣಗಳನ್ನು ಆರೋಗ್ಯ ಇಲಾಖೆ ಇತ್ತೀಚಿನ ವರ್ಷಗಳಲ್ಲಿ ಕಟ್ಟುನಿಟ್ಟಾಗಿ ಮಾಹಿತಿ ಸಂಗ್ರಹ ಮಾಡುತ್ತಿದೆ. ಜಿಲ್ಲಾ ಕಣ್ಗಾವಲು ಘಟಕ ನೀಡಿರುವ ಮಾಹಿತಿ ಪ್ರಕಾರ, 2023ರಲ್ಲಿ 56, 2024ರಲ್ಲಿ 261 ಜನರಿಗೆ ಹಾವು ಕಚ್ಚಿದ್ದು, ಸಾವಿನ ಪ್ರಕರಣಗಳನ್ನು ವರದಿ ಮಾಡಿಕೊಂಡಿಲ್ಲ. ಆದರೆ ನಂತರದ ವರ್ಷವಾದ 2025ರಿಂದ ಸಾವಿನ ಪ್ರಕರಣಗಳನ್ನು ಸಂಗ್ರಹ ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 414 ಜನರಿಗೆ ಹಾವು ಕಚ್ಚಿತ್ತು. ಇವರಲ್ಲಿ ಚಾಮರಾಜನಗರ ತಾಲೂಕಿನಲ್ಲಿ 1, ಗುಂಡ್ಲುಪೇಟೆ ತಾಲೂಕಿನಲ್ಲಿ 2, ಹನೂರು ತಾಲೂಕಿನಲ್ಲಿ 4, ಕೊಳ್ಳೇಗಾಲ ತಾಲೂಕಿನಲ್ಲಿ 2, ಯಳಂದೂರು ತಾಲೂಕಿನಲ್ಲಿ 1 ಸೇರಿ ಒಟ್ಟು 10 ಜನರು ಹಾವು ಕಡಿತದಿಂದ ಮೃತಪಟ್ಟಿದ್ದಾರೆ. 2026ರಲ್ಲಿ 205 ಜನರಿಗೆ ಹಾವು ಕಚ್ಚಿದ್ದು, ಚಾಮರಾಜನಗರ ತಾಲೂಕಿನಲ್ಲಿ 2, ಗುಂಡ್ಲುಪೇಟೆ ತಾಲೂಕಿನಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ.
ಉರಗ ರಕ್ಷಕರಿಗೂ ಇಲ್ಲ ಪರಿಹಾರ:
ಜಮೀನು ಮತ್ತು ಮನೆಗಳ ಬಳಿ ಹಾವು ಕಂಡರೆ ಅವುಗಳನ್ನು ರಕ್ಷಣೆ ಮಾಡುವ ಉರಗ ಸಂರಕ್ಷಕರಿಗೆ ಅಚಾನಕ್ಕಾಗಿ ಹಾವು ಕಚ್ಚಿ ಮೃತಪಟ್ಟರೂ ಪರಿಹಾರ ದೊರೆಯುವುದಿಲ್ಲ. ಈ ಕುರಿತು ಉರಗ ರಕ್ಷಕರ ಸ್ನೇಕ್ ಅಶೋಕ್ ವಿಜಯವಾಣಿಯೊಂದಿಗೆ ಮಾತನಾಡಿ, ಅರಣ್ಯ ಇಲಾಖೆಯಿಂದ ನಮಗೆ ತರಬೇತಿಯನ್ನು ನೀಡಲಾಗಿದೆ. ನಾನು 29 ವರ್ಷಗಳಿಂದ ಹಾವುಗಳ ರಕ್ಷಣೆ ಮಾಡುತ್ತಿದ್ದೇನೆ. ನನಗೆ ಎರಡು ಬಾರಿ ಹಾವು ಕಚ್ಚಿದೆ. ಒಂದು ಬೆರಳು ಇಲ್ಲ. ಈ ಸಂದರ್ಭದಲ್ಲಿ ಯಾರಿಂದಲೂ ನನಗೆ ಸಹಾಯ ದೊರೆಯಲಿಲ್ಲ. ವರ್ಷಗಟ್ಟಲೆ ಅನಾರೋಗ್ಯ ಸಮಸ್ಯೆ ಅನುಭವಿಸಿದ್ದೇನೆ. ಕೊನೆ ಪಕ್ಷ ನಮಗೆ ಜೀವ ವಿಮೆಯನ್ನಾದರೂ ನೀಡಿದರೆ ಉರಗ ರಕ್ಷಕರ ಕುಟುಂಬಕ್ಕೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದ್ದಾರೆ.
ರೈತರು ಹಾವು ಕಚ್ಚಿ ಮೃತಪಟ್ಟರೆ ವನ್ಯಜೀವಿಗಳ ದಾಳಿಯಿಂದ ಸಂಭವಿಸಿದ ಸಾವಿಗೆ ನೀಡುವಂತೆ 20 ಲಕ್ಷ ರೂ. ಪರಿಹಾರವನ್ನು ನೀಡಬೇಕು. ಪ್ರಸ್ತುತ ನೀಡುತ್ತಿರುವ 2 ಲಕ್ಷ ರೂ. ಪರಿಹಾರ ತೀರಾ ಕಡಿಮೆಯಾಯಿತು.
ಹೊನ್ನೂರು ಪ್ರಕಾಶ್, ರೈತ ನಾಯಕ, ಚಾಮರಾಜನಗರ
ಕೃಷಿ ಕೆಲಸದ ವೇಳೆ ಹಾವು ಕಚ್ಚಿ ರೈತರು ನಿಧನರಾದರೆ ಇದನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಿ ರಾಜ್ಯ ಸರ್ಕಾರದಿಂದ 2 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಪರಿಹಾರ ಧನವನ್ನು ಹೆಚ್ಚಳ ಮಾಡುವುದು ಸರ್ಕಾರದ ಹಂತದ ನಿರ್ಧಾರವಾಗಿದೆ.
ಭಾನುಪ್ರಕಾಶ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಚಾಮರಾಜನಗರ