ಚಾಮರಾಜನಗರದ ಮಹಾಮನೆಯಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸಿದ್ದಗಂಗಾ ಶ್ರೀಗಳ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಚಾಮುಲ್ ಅಧ್ಯಕ್ಷ ಮಧುವನಹಳ್ಳಿ ನಂಜುಂಡಸ್ವಾಮಿ ಮತ್ತು ನಿವೃತ್ತ ಸೈನಿಕ ನಾಗಪ್ಪ ಅವರನ್ನು ಸನ್ಮಾನಿಸಲಾಯಿತು. ಕೊತ್ತಲವಾಡಿ ಮಹದೇವಸ್ವಾಮಿ, ತೋಟೇಶ್, ಎಂ.ಸುಂದರ್, ಕೊಡಿಮೋಳೆ ರಾಜಶೇಖರ್, ಎನ್‌ರಿಚ್ ಮಹದೇವಸ್ವಾಮಿ ಮತ್ತು ಇತರರು ಇದ್ದರು.
- ನಿವೃತ್ತ ಸೈನಿಕ ನಾಗಪ್ಪಗೆ ಗೌರವ ಸಲ್ಲಿಕೆ
- ಚಾಮುಲ್ ಅಧ್ಯಕ್ಷ ಮಧುವನಹಳ್ಳಿ ನಂಜುಂಡಸ್ವಾಮಿಗೆ ಸನ್ಮಾನ
ಚಾಮರಾಜನಗರ: ಶ್ರೀಶಿವಕುಮಾರ ಸ್ವಾಮೀಜಿಗಳು ಈ ಶತಮಾನದ ಯುಗಪುರುಷ ಮತ್ತು ದಾರ್ಶನಿಕ ಸಂತ ಎಂದು ಚಾಮುಲ್ ಅಧ್ಯಕ್ಷ ಮಧುವನಹಳ್ಳಿ ನಂಜುಂಡಸ್ವಾಮಿ ಹೇಳಿದರು.
ನಗರದ ಮಹಾಮನೆಯಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸಿದ್ದಗಂಗಾ ಶ್ರೀಗಳ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಕ್ಷರ, ಅನ್ನ, ಆರೋಗ್ಯ, ಆಶ್ರಯ ನೀಡಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿರುವ ಶ್ರೀಗಳು ಈ ಕಾಲದ ‘ಅಭಿನವ ಬಸವಣ್ಣ’ ಎಂದು ಹೇಳಿದರು.
ಹಲವು ಸವಾಲುಗಳಿದ್ದರೂ ನಾಡಿನ ಎಲ್ಲ ಮಕ್ಕಳಿಗೆ ವರ್ಗಭೇದ, ಲಿಂಗಭೇದವಿಲ್ಲದೆ ಶಿಕ್ಷಣ ನೀಡಲು ವಿಶ್ರಾಂತಿ ಇಲ್ಲದೆ ಸೇವೆ ಮಾಡಿರುವ ಅವರ ಕಾಯಕ, ದಾಸೋಹ ತತ್ವದ ಸರಳ ಜೀವನ ಸಂದೇಶಗಳು ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಪ್ರೌಢಶಾಲಾ ಶಿಕ್ಷಕ ಕೊತ್ತಲವಾಡಿ ಮಹದೇವಸ್ವಾಮಿ ಮಾತನಾಡಿ, ಶಿವಕುಮಾರ ಶ್ರೀಗಳ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ರಾಂತಿ ಭಾರತದ ಇತಿಹಾಸದಲ್ಲಿ ಸುವರ್ಣಯುಗ ಎಂದು ಬಣ್ಣಿಸಿದರು. ಸಮಾಜದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ ಎಂಬ ತತ್ವದಲ್ಲಿ ನಂಬಿಕೆ ಹೊಂದಿದ್ದ ಶ್ರೀಗಳು ನಾಡಿನ ತುಂಬಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಜನರಿಗೆ ಜ್ಞಾನದ ಬೆಳಕು ನೀಡಿದ್ದಾರೆ ಎಂದು ತಿಳಿಸಿದರು.
ಮೂಡಗೂರಿನ ಉದ್ದಾನಸ್ವಾಮೀಜಿ ಮಾತನಾಡಿ, ಸಿದ್ದಗಂಗಾ ಶ್ರೀಗಳು ಕಾಯಕ ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದ ಕಾಯಕಯೋಗಿ ಎಂದು ತಿಳಿಸಿದರು. ಅವರು ಬದುಕಿದ್ದ ಕಾಲಘಟ್ಟ ದಲ್ಲಿದ್ದು, ಅವರನ್ನು ನೋಡುವ, ಆಶೀರ್ವಾದ ಪಡೆಯುವ ಭಾಗ್ಯ ಪಡೆದ ನಾವೇ ಧನ್ಯರು ಎಂದರು. ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಗುಂಡ್ಲುಪೇಟೆ ತಾಲೂಕು ಗೋಪಾಲಪುರದ ನಿವೃತ್ತ ಸೈನಿಕ ನಾಗಪ್ಪ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಎಂ.ಸುಂದರ್, ಕೊಡಿಮೋಳೆ ರಾಜಶೇಖರ್, ಎನ್‌ರಿಚ್ ಮಹದೇವಸ್ವಾಮಿ, ಸಂಘದ ಉಪಾಧ್ಯಕ್ಷರಾದ ಐಟಿಐ ಮಹದೇವಸ್ವಾಮಿ, ಗೌರಮ್ಮ, ಅರ್ಕಪ್ಪ, ಜ್ಯೋತಿ ಪಟೇಲ್, ದೊಡ್ಡರಾಯಪೇಟೆ ನಾಗರಾಜು, ಬಿ.ಎಸ್.ಬಸವರಾಜಪ್ಪ, ಕಾಳನಹುಂಡಿ ಗುರುಸ್ವಾಮಿ, ಪರಮೇಶ್ ಪಟೇಲ್, ಪೊಲೀಸ್ ಜಯಶಂಕರ ಮೂರ್ತಿ, ಗಂಗಾಧರ್, ಮಾದಲವಾಡಿ ಮಲ್ಲಿಕಾರ್ಜುನಪ್ಪ, ಶಿವಮಲ್ಲಪ್ಪ, ಪದ್ಮಾಕ್ಷಿ, ಯೋಗ ಶ್ರೀಕಾಂತ್, ಉಡಿಗಾಲ ಶಶಿಧರ್, ಗುರುಸ್ವಾಮಿ, ಶಿವಲಿಂಗಪ್ಪ, ಕೆಂಪಲಿಂಗಪ್ಪ, ಸಿದ್ದಪ್ಪ, ಮಲ್ಲಣ್ಣ, ಸಿದ್ದಲಿಂಗಸ್ವಾಮಿ, ಸೋಮೇಶ್, ಶಿವಕುಮಾರಸ್ವಾಮಿ, ನಂಜುಂಡಸ್ವಾಮಿ, ಶಿವಪ್ರಸಾದ್, ವೀರಶೆಟ್ಟಿ, ಚಿನ್ನಮಣಿ, ರತ್ನಮ್ಮ ಮತ್ತು ಕದಳಿ ಮಹಿಳಾ ವೇದಿಕೆಯ ಸದಸ್ಯರು ಹಾಜರಿದ್ದರು.