ಯಳಂದೂರು ತಾಲೂಕಿನ ದೇವರಹಳ್ಳಿಯಲ್ಲಿರುವ ಸೋಲಿಗರ ಮನೆ
- ಸರ್ವೇಯಲ್ಲಿ ಗುರುತಿಸಿದ್ದ 2995 ವಸತಿ ರಹಿತರು
- ಬುಡಕಟ್ಟು ಸಮುದಾಯಕ್ಕೆ ಸೂರು ಒದಗಿಸುವ ಪ್ರಕ್ರಿಯೆ
- 2995 ವಸತಿ ರಹಿತರು
ಚಾಮರಾಜನಗರ: ನೆತ್ತಿ ಮೇಲೊಂದು ಸೂರಿಲ್ಲದ, ಸೋರುತ್ತಿರುವ ಮಾಳಿಗೆಯಲ್ಲಿ ವಾಸ ಮಾಡುತ್ತಿರುವ ಬುಡಕಟ್ಟು ಸಮುದಾಯಕ್ಕೆ ವಸತಿ ಸೌಲಭ್ಯ ನೀಡಲು ದಾಖಲೆಗಳ ಸಂಗ್ರಹ ಶುರುವಾಗಿದೆ.
ಮುಖ್ಯಮಂತ್ರಿ ಆದಿವಾಸಿ ಗೃಹಭಾಗ್ಯ ಎಂಬ ಹೆಸರಿನ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಅರಣ್ಯ ಮತ್ತು ಅರಣ್ಯಾಧಾರಿತ ಸಮುದಾಯಗಳಾದ ಸೋಲಿಗ, ಹಸಲರು, ಗೌಡಲು, ಸಿದ್ಧಿ, ಕುಡಿಯ, ಮಲೆ ಕುಡಿಯ, ಕಾಡು ಕುರುಬ, ಇರುಳಿಗ, ಬೆಟ್ಟ ಕುರುಬ, ಯರವ, ಣಿಯನ್ ಇತ್ಯಾದಿ ಸಮುದಾಯಗಳ 6,856 ವಸತಿ ರಹಿತ ಕುಟುಂಬಗಳಿಗೆ ಸೌಲಭ್ಯ ಒದಗಿಸಿಕೊಡಲು ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಈ ಸಂಬಂಧ ಕಾನೂನು ಸಚಿವ ಎಚ್.ಕೆ.ಪಾಟೀಲ ಸುದ್ದಿಗೋಷ್ಠಿ ನಡೆಸಿ, ಈ ಯೋಜನೆಗಾಗಿ 160 ಕೋಟಿ ರೂ.ಅನುದಾನವನ್ನು ಮೀಸಲು ಇಟ್ಟು, ಪ್ರತಿ ಮನೆಯನ್ನು 4.50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದ್ದರು. ಇದೀಗ ಈ ಸೌಲಭ್ಯವನ್ನು ಜಾರಿಗೊಳಿಸುವ ಸಲುವಾಗಿ ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಜಿಲ್ಲೆಯ ಇಲಾಖೆಗೆ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ವಸತಿ ರಹಿತ ಆದಿವಾಸಿಗಳ ದಾಖಲೆಗಳ ಸಂಗ್ರಹ ಆರಂಭಗೊಂಡಿದೆ. ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಮತ್ತು ಆದಿವಾಸಿಗಳ ವಾಸಸ್ಥಳ ಗಡಿಜಿಲ್ಲೆ ಚಾಮರಾಜನಗರ. ಇಲ್ಲಿ ಸೋಲಿಗ, ಕಾಡುಕುರುಬ, ಬೆಟ್ಟ ಕುರುಬ ಸಮುದಾಯದವರು ನೆಲೆ ನಿಂತಿದ್ದಾರೆ. ಜಿಲ್ಲಾಡಳಿತದಿಂದ ಇವರಲ್ಲಿ ವಸತಿ ರಹಿತರ ಸರ್ವೇ ಮಾಡಿ ಪಟ್ಟಿ ಮಾಡಲಾಗಿದೆ. ಈಗ ಇವರ ದಾಖಲೆಗಳ ಸಂಗ್ರಹ ಮಾಡಲು ಮಾಹಿತಿಯನ್ನು ಪ್ರಚಾರ ಮಾಡಲಾಗುತ್ತಿದ್ದು, ವಸತಿ ರಹಿತರು ತಾಲೂಕುಗಳಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.
ರಾಜ್ಯದಲ್ಲಿ 6,856 ವಸತಿ ರಹಿತ ಆದಿವಾಸಿಗಳಿದ್ದರೆ ಚಾಮರಾಜನಗರ ಜಿಲ್ಲೆಯಲ್ಲಿ 2995 ಕುಟುಂಬಗಳಿವೆ. ಜಿಲ್ಲಾಡಳಿತದಿಂದ ಮನೆ ಇಲ್ಲದ ಆದಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಈ ಹಿಂದೆ ಸಮೀಕ್ಷೆ ನಡೆಸಲಾಗಿತ್ತು. ಅದರ ಪ್ರಕಾರ, ಚಾಮರಾಜನಗರ ತಾಲೂಕಿನಲ್ಲಿ 810 (ನಿವೇಶನ ಲಭ್ಯವಿದ್ದು, ಮನೆ ಇಲ್ಲದ ಕುಟುಂಬಗಳು-810), ಕೊಳ್ಳೇಗಾಲ ತಾಲೂಕಿನಲ್ಲಿ 1049 (ನಿವೇಶನ ಲಭ್ಯವಿದ್ದು, ಮನೆ ಇಲ್ಲದ ಕುಟುಂಬ-1049, ನಿವೇಶನ ಮತ್ತು ಮನೆ ಇಲ್ಲದ ಕುಟುಂಬಗಳು-199), ಗುಂಡ್ಲುಪೇಟೆ ತಾಲೂಕಿನಲ್ಲಿ 314 (ನಿವೇಶನ ಲಭ್ಯವಿದ್ದು, ಮನೆ ಇಲ್ಲದ ಕುಟುಂಬ-279, ನಿವೇಶನ ಮತ್ತು ಮನೆ ಇಲ್ಲದ ಕುಟುಂಬಗಳು-35), ಯಳಂದೂರು ತಾಲೂಕಿನಲ್ಲಿ 623 (ನಿವೇಶನ ಲಭ್ಯವಿದ್ದು, ಮನೆ ಇಲ್ಲದ ಕುಟುಂಬಗಳು-623) ಕುಟುಂಬಗಳು ಸೇರಿ ಒಟ್ಟಾರೆ 2995 ಕುಟುಂಬಳಿಗೆ ವಸತಿ ಸೌಲಭ್ಯದ ಅಗತ್ಯವಿರುವುದು ಸರ್ವೇಯಲ್ಲಿ ದಾಖಲಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿ ವಸತಿ ಸೌಲಭ್ಯ ನೀಡಬೇಕೆಂದು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಬೇರೆ ಜಿಲ್ಲೆಗಳಲ್ಲೂ ಇರುವ ಅಂದರೆ, ರಾಜ್ಯದಲ್ಲಿ ಒಟ್ಟಾರೆಯಾಗಿ ಇರುವ 6,856 ವಸತಿ ರಹಿತರಿಗೆ ಸೌಲಭ್ಯ ನೀಡುವ ಸಲುವಾಗಿ ಮುಖ್ಯಮಂತ್ರಿ ಆದಿವಾಸಿ ಗೃಹಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಡೆಸಿರುವ ಸರ್ವೇಯಲ್ಲಿ ಪತ್ತೆಯಾಗಿರುವ 2995 ವಸತಿ ರಹಿತರ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ.
ತ್ರಾಸವಾಗದಿರಲಿ ದಾಖಲೆಗಳ ಒದಗಿಸುವಿಕೆ
ವಸತಿ ರಹಿತ ಆದಿವಾಸಿಗಳು ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಯೋಜನೆಯನ್ನು ಬಳಕೆ ಮಾಡಿಕೊಳ್ಳಲು ಮುಂದಾಗಬೇಕಾಗಿದೆ. ಲಾನುಭವಿಗಳು ನೀಡುವ ದಾಖಲೆಗಳಲ್ಲಿ ಈ ಹಿಂದೆ ಬೇರೆ ಯೋಜನೆಯಡಿ ವಸತಿ ಸೌಲಭ್ಯ ಪಡೆದೆ ಇರುವುದು ಬಹುಮುಖ್ಯವಾಗಿರುತ್ತದೆ. ಉಳಿದ ಸರಳ ದಾಖಲೆಗಳನ್ನು ಸಲ್ಲಿಸಲು ಹಲವರು ಅನಕ್ಷರಸ್ಥರಾಗಿರುವ ಆದಿವಾಸಿಗಳಿಗೆ ಸ್ವಲ್ಪ ತ್ರಾಸವಾಗಬಹುದು. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಸಮುದಾಯದ ಸಂಘಟನೆಗಳ ಸಹಕಾರವನ್ನು ಪಡೆದುಕೊಳ್ಳಲೇಬೇಕಿದೆ. ಜನನ-ಮರಣ ಪ್ರಮಾಣಪತ್ರ, ಆಧಾರ್ ಕಾರ್ಡ್ ಇಲ್ಲದವರಿಗೆ ಸಕಾಲದಲ್ಲಿ ದಾಖಲೆಗಳನ್ನು ಮಾಡಿಸಿಕೊಡಬೇಕಿದೆ.
ನಮ್ ‘ಸಿದ್ದು ನಿವಾಸ’ಯೇ ದಿಕ್ಸೂಚಿ:
ಜಿಲ್ಲೆಯಲ್ಲಿ ಮನೆ ಇಲ್ಲದ ಆದಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಪ್ರಾಯೋಗಿಕವಾಗಿ ನಿರ್ಮಾಣ ಮಾಡಿದ್ದ ಸಿದ್ದು ನಿವಾಸ ರಾಜ್ಯಕ್ಕೆ ಮಾದರಿಯಾಗಿದ್ದು, ಮುಖ್ಯಮಂತ್ರಿ ಆದಿವಾಸಿ ಗೃಹಭಾಗ್ಯ ಯೋಜನೆಗೂ ದಿಕ್ಸೂಚಿಯಾಗಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಕಾಳಜಿವಹಿಸಿ ಮಲೆ ಮಹದೇಶ್ವರ ಬೆಟ್ಟದ ಆಣೆಹೊಳ ಗ್ರಾಮದ ಸೋಲಿಗ ಮಂಜುನಾಥ್‌ಗೆ ಸಿದ್ದು ನಿವಾಸ ಹೆಸರಿನಲ್ಲಿ ಒಂದು ಮನೆ ನಿರ್ಮಾಣ ಮಾಡಿಕೊಡಲಾಗಿತ್ತು. ಇದೇ ಮಾದರಿಯಲ್ಲಿ ಉಳಿದ ವಸತಿ ರಹಿತರಿಗೂ ಮನೆ ಕಟ್ಟಿಕೊಡುವ ಯೋಜನೆ ಇದಾಗಿತ್ತು. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಸಿದ್ದು ನಿವಾಸವನ್ನು ಉದ್ಘಾಟನೆ ಮಾಡಬೇಕಿತ್ತು. ಆದರೆ ಕಾರಣಾಂತರಂಗಳಿಂದ ಉದ್ಘಾಟನೆಯಾಗಲಿಲ್ಲ. ಆದರೂ ಲಾನುಭವಿಗೆ ಮನೆಯನ್ನು ಹಸ್ತಾಂತರ ಮಾಡಲಾಯಿತು.
ಪಾಳು ಬಿದ್ದಂತಿರುವ, ಗೋಡೆ ಬಿರುಕು ಬಿಟ್ಟಿರುವ, ಕಿಟಕಿ, ಬಾಗಿಲುಗಳು ಮುರಿದು ಹೋಗಿರುವ ಮನೆಗಳು, ಗುಡಿಸಲುಗಳು, ಸೋಪಡಿಗಳಲ್ಲಿ ಜಿಲ್ಲೆಯ ಆದಿವಾಸಿಗಳು ಜೀವನ ನಡೆಸುತ್ತಿದ್ದಾರೆ. ಚಿಕ್ಕ ಮನೆಯಲ್ಲಿ ಹಲವು ಜನರು ವಾಸ ಮಾಡಲಾಗದೆ ಪಕ್ಕದಲ್ಲಿ ಜೋಪಡಿ, ಶೀಟ್‌ಗಳನ್ನು ಕಟ್ಟಿಕೊಂಡಿದ್ದಾರೆ. ಮಳೆ ಬಂದರೆ ಸೋರುವ ಮನೆಗಳು ಆದಿವಾಸಿಗಳ ಶೋಚನೀಯ ಬದುಕಿಗೆ ಹಿಡಿದ ಕನ್ನಡಿಯಾಗಿದೆ.
ಮುಖ್ಯಮಂತ್ರಿ ಆದಿವಾಸಿ ಗೃಹಭಾಗ್ಯ ಯೋಜನೆಯಡಿ ವಸತಿ ರಹಿತರಿಗೆ ಸೌಲಭ್ಯ ಒದಗಿಸಲು ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ಕೇಂದ್ರ ಕಚೇರಿಯಿಂದ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ದಾಖಲೆಗಳ ಸಂಗ್ರಹ ಶುರುವಾಗಿದೆ. ವಸತಿ ರಹಿತರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಆಯಾ ತಾಲೂಕು ಕಚೇರಿಗಳಿಗೆ ದಾಖಲೆಗಳನ್ನು ತಲುಪಿಸಿದರೆ ಅನುಕೂಲವಾಗಲಿದೆ.
ಬಿಂದ್ಯಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಚಾಮರಾಜನಗರ
ಆದಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ರಾಜ್ಯ ಸರ್ಕಾರದ ಗಮನ ಸೆಳೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಹಾಡಿ, ಪೋಡುಗಳಲ್ಲಿ ಹಳೆಯ ಕಾಲದ ಸಣ್ಣ ಸಣ್ಣ ಮನೆಗಳಲ್ಲಿ ವಾಸ ಮಾಡುತ್ತಿರುವವರಿಗೆ ಹೊಸ ಮನೆ ಕಟ್ಟಿಸಿಕೊಡಬೇಕು. ಈ ನಿಟ್ಟಿನಲ್ಲಿ ಈ ಯೋಜನೆಯಿಂದ ಮನೆ ಇಲ್ಲದವರಿಗೆ ಸೂರು ದೊರೆಯುತ್ತಿರುವುದು ಒಳ್ಳೆಯ ವಿಚಾರ.
ಜಡೆಸ್ವಾಮಿ, ಜಿಲ್ಲಾ ಅರಣ್ಯ ಹಕ್ಕು ಸಮಿತಿ ಸದಸ್ಯ, ಚಾಮರಾಜನಗರ