ಲಕ್ಕರಸನಪಾಳ್ಯ ಗ್ರಾಮದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು. ರಾಜೇಂದ್ರ, ಬಿ.ತೋಟೇಶ್, ಶಾಂತಮ್ಮ, ರಾಜು, ಚೇತನ್ ದೊರೆರಾಜು, ಪುಟ್ಟಣ್ಣ ಇದ್ದರು. 
ಚಾಮರಾಜನಗರ

ಕೆಲಸಗಳ ಮೂಲಕ ಟೀಕೆಗಳಿಗೆ ಸಿಎಂ ಉತ್ತರ

ಪ್ರಮುಖ ಮುಖ್ಯಾಂಶಗಳು

  • ವಿರೋಧ ಪಕ್ಷಗಳ ಟೀಕೆ-ಟಿಪ್ಪಣಿ
  • ಸಿದ್ದರಾಮಯ್ಯ ಅವರು ತಮ್ಮ ಕೆಲಸಗಳ ಮೂಲಕ ಉತ್ತರ
  • ಶಾಸಕ ಎ.ಆರ್.ಕೃಷ್ಣಮೂರ್ತಿ
ಕೊಳ್ಳೇಗಾಲ:ವಿರೋಧ ಪಕ್ಷಗಳ ಟೀಕೆ-ಟಿಪ್ಪಣಿಗಳಿಗೆ ಸಿದ್ದರಾಮಯ್ಯ ಅವರು ತಮ್ಮ ಕೆಲಸಗಳ ಮೂಲಕ ಉತ್ತರ ನೀಡಿದ್ದಾರೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ತಾಲೂಕಿನ ಲಕ್ಕರಸನಪಾಳ್ಯ ಗ್ರಾಮದಲ್ಲಿ 15 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಚಾಲನೆ ನೀಡಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. 56 ಸಾವಿರ ಕೋಟಿ ರೂ.ಗಳನ್ನು ಯೋಜನೆಗೆ ಮೀಸಲಿಡಲಾಗಿದೆ. ಜನಪರವಾದ ಆಡಳಿತವನ್ನು ಕಾಂಗ್ರೆಸ್ ಮಾಡುತ್ತಿದ್ದು ಸಿಎಂ ಅವರು ತಮ್ಮ ಕೆಲಸದಿಂದಲೇ ಟೀಕೆ ಮಾಡಿದವರಿಗೆ ಉತ್ತರ ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಬಾರಿ 50 ಸಾವಿರ ಕೋಟಿ ರೂ.ಗಳನ್ನು ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ನೀಡಿದೆ. ಸಿದ್ದರಾಮಯ್ಯ ಅವರು ಕ್ಷೇತ್ರದ ಗ್ರಾಮೀಣ ಅಭಿವೃದ್ಧಿಗೆ ಬಳಸಿ ಎಂದು ತಿಳಿಸಿದ್ದಾರೆ. ಅಂತೆಯೇ ಗ್ರಾಮೀಣ ಭಾಗಗಳ ರಸ್ತೆಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಈವರೆಗೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಾನು ಕೇಳಿದ ಎಲ್ಲ ಕೆಲಸಗಳನ್ನು ಸಿದ್ದರಾಮಯ್ಯ ಅವರು ಮಾಡಿಕೊಟ್ಟಿದ್ದಾರೆ ಎಂದರು.
ಕುಣಗಳ್ಳಿ ಗ್ರಾಮದ ಪರಿಶಿಷ್ಟ ಜನಾಂಗದ ಬಡಾವಣೆಯಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ನಡೆಸಲು ಚಾಲನೆ ನೀಡಲಾಗಿದೆ. ಅಂತೆಯೇ ಲಕ್ಕರಸನಪಾಳ್ಯ ಗ್ರಾಮದ ಪರಿಶಿಷ್ಟ ಜನಾಂಗದವರ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ, ಹರಳೆ ಗ್ರಾಮದ ಪರಿಶಿಷ್ಟ-ಪಂಗಡ ಬಡಾವಣೆ, ಮುಳ್ಳೂರು ಗ್ರಾಮದ ಪರಿಶಿಷ್ಟ ಜನಾಂಗದ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್ ಮಾತನಾಡಿ, ಎ.ಆರ್.ಕೃಷ್ಣಮೂರ್ತಿ ಅವರು ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಸಿದ್ದಯ್ಯನಪುರ ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಮಾಜಿ ಅಧ್ಯಕ್ಷೆ ಶಶಿಕುಮಾರಿ, ಸದಸ್ಯೆ ಲಕ್ಷ್ಮೀ, ತಿಮ್ಮರಾಜೀಪುರ ಗ್ರಾಪಂ ಮಾಜಿ ಅಧ್ಯಕ್ಷ ರಾಜು, ಪಿಡಿಒ ಜುನೇದ್ ಅಹಮ್ಮದ್, ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ, ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಚೇತನ್ ದೊರೆರಾಜು, ಗ್ರಾಮದ ಮುಖಂಡ ಪುಟ್ಟಣ್ಣ, ಉದಯ್ ಕುಮಾರ್ ಮತ್ತಿತರರಿದ್ದರು.