ಗುಂಡ್ಲುಪೇಟೆಯ ನ್ಯಾಯಾಲಯಗಳ ಸಂಕೀರ್ಣ ಮತ್ತು ಸುತ್ತಲಿನ ಪರಿಸರದಲ್ಲಿ ಶುಕ್ರವಾರ ಸ್ವಚ್ಛತಾ ಕಾರ್ಯ ನಡೆಸಲಾಯಿತು. 
ಚಾಮರಾಜನಗರ

ನ್ಯಾಯಾಲಯಗಳ ಸಂಕೀರ್ಣದಲ್ಲಿ ಸ್ವಚ್ಛತಾ ಕಾರ್ಯ

ಎಂ.ರವಿ
ಗುಂಡ್ಲುಪೇಟೆ: ಪಟ್ಟಣದ ನ್ಯಾಯಾಲಯಗಳ ಸಂಕೀರ್ಣ ಮತ್ತು ಸುತ್ತಲಿನ ಪರಿಸರದಲ್ಲಿ ಶುಕ್ರವಾರ ಸ್ವಚ್ಛತಾ ಕಾರ್ಯ ನಡೆಸಲಾಯಿತು. 
ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ಎಚ್.ತಳವಾರ್ ಚಾಲನೆ ನೀಡಿ ಮಾತನಾಡಿ, ನಾವು ವಾಸಿಸಿರುವ ಪ್ರದೇಶ, ಕೆಲಸ ಮಾಡುವ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವೈಯಕ್ತಿಕ ಮತ್ತು ಸಾರ್ವಜನಿಕ ಸ್ವಚ್ಛತೆಯ ಕಾಳಜಿ ಸ್ವಚ್ಛ ಭಾರತ ಪರಿಕಲ್ಪನೆ ಸಾಕಾರಗೊಳ್ಳಲು ಕೊಡುಗೆ ನೀಡಿದಂತೆ. ಹೀಗಾಗಿ ಸ್ವಚ್ಛತೆ ವಿಷಯದಲ್ಲಿ ಯಾವುದೇ ಸಂಕೋಚವಿಲ್ಲದೆ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು.
ಕೆಲವೇ ನಿಮಿಷಗಳ ಶ್ರಮದಿಂದ ಪರಿಸರ ಸ್ವಚ್ಛವಾಗುತ್ತದೆ. ಶ್ರಮವನ್ನು ಹಂಚಿಕೆ ಮಾಡಿಕೊಂಡು ದಿನದಲ್ಲಿ ಕೆಲ ನಿಮಿಷಗಳಾದರೂ ಸ್ವಚ್ಛತೆಗೆ ಮೀಸಲಿಡಿ. ಜನರಲ್ಲೂ ಈ ಬಗ್ಗೆ ಅರಿವು ಮೂಡಿಸಿ ಎಂದು ಕಿವಿಮಾತು ಹೇಳಿದರು. 
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್, ಕಾರ್ಯದರ್ಶಿ ಜವರಾಜುಪಾಳ್ಯ ಮತ್ತು ನ್ಯಾಯಾಂಗ ಇಲಾಖೆ ನೌಕರರು ಹಾಜರಿದ್ದರು.