ಚಿಂಚಳ್ಳಿ ಗ್ರಾಮದಲ್ಲಿ ಚೆಕ್ ಡ್ಯಾಂ ಭರ್ತಿಯಾದ ಹಿನ್ನಲೆ ಶಾಸಕ ಎಂ.ಆರ್ ಮಂಜುನಾಥ್ ಬಾಗಿನ ಅರ್ಪಿಸಿದರು. ಬಸವಣ್ಣ ಸ್ವಾಮೀಜಿ, ಗುರಮಲ್ಲಪ್ಪ, ನಾಗೇಂದ್ರಬಾಬು, ಶಾಗ್ಯ ರವಿ ಇತರರಿದ್ದರು.  
ಚಾಮರಾಜನಗರ

ಚಿಂಚಳ್ಳಿ ಚೆಕ್ ಡ್ಯಾಂಗೆ ಶಾಸಕರಿಂದ ಬಾಗಿನ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಕಾವೇರಿ ನೀರು ಹರಿಸಿದ ಹಿನ್ನೆಲೆಯಲ್ಲಿ ಭರ್ತಿ ಸುತ್ತಲಿನ ಗ್ರಾಮಗಳ ರೈತರಲ್ಲಿ ಸಂತಸ
  • ಶುಕ್ರವಾರ ಶಾಸಕ ಎಂ.ಆರ್. ಮಂಜುನಾಥ್ ಬಾಗಿನ ಅರ್ಪಿಸಿದರು.
ಹನೂರು: ತಾಲೂಕಿನ ಚಿಂಚಳ್ಳಿ ಭಾಗದಲ್ಲಿ ಚೆಕ್ ಡ್ಯಾಂಗಳು ಕಾವೇರಿ ನೀರಿನಿಂದ ಭರ್ತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕ ಎಂ.ಆರ್. ಮಂಜುನಾಥ್ ಬಾಗಿನ ಅರ್ಪಿಸಿದರು.
ಈ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದಲೂ ಸಮರ್ಪಕ ಮಳೆಯಾಗದ ಪರಿಣಾಮ ರಾಮನಗುಡ್ಡೆ ಕೆರೆ ಬತ್ತಿ ಹೋಗಿತ್ತು. ಇದರಿಂದ ಕೃಷಿಗೆ ತೊಡಕಾಗಿ ಪರಿಣಮಿಸಿತ್ತು. ಜತೆಗೆ ಕುಡಿಯುವ ನೀರಿಗೂ ಸಮಸ್ಯೆಯಾಗಿತ್ತು. ಈ ಬಗ್ಗೆ ಅಗತ್ಯ ಕ್ರಮವಹಿಸಿದ ಶಾಸಕ ಎಂ.ಆರ್ ಮಂಜುನಾಥ್ ಅವರು ಕಾವೇರಿ ನದಿ ಮೂಲದಿಂದ ರಾಮನಗುಡ್ಡೆ ಕೆರೆಗೆ ಕಳೆದ ತಿಂಗಳು ಹಳ್ಳದ ಮೂಲಕ ನೀರು ಹರಿಸಿದ್ದರು. ಜತೆಗೆ ಬೂದುಬಾಳು ಗ್ರಾಮದ ದೊಡ್ಡಕೆರೆಗೂ ಪೈಪ್‌ಲೈನ್ ಮೂಲಕ ನೀರುಹರಿಸಿದ್ದು, ಭರ್ತಿಯಾಗಿದೆ. ಹಾಗೆಯೇ ಚಿಂಚಳ್ಳಿ, ಬಂಡಳ್ಳಿ, ಶಾಗ್ಯ, ತೊಮಿಯಾರ್‌ಪಾಳ್ಯ ಹಾಗೂ ಈ ಭಾಗದ ಇನ್ನಿತರ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ರಾಮನಗುಡ್ಡೆ ಕೆರೆಯಿಂದ ಚಿಂಚಳ್ಳಿ ಮಾರ್ಗದಲ್ಲಿನ ಹಳ್ಳಕ್ಕೆ ನೀರು ಹರಿಸುವಂತೆ ಮನವಿ ಮಾಡಿದ್ದರು. ಕಳೆದ ವಾರದ ಹಿಂದೆ ಹಳ್ಳಕ್ಕೆ ಕಾವೇರಿ ನೀರನ್ನು ಹರಿಸಲಾಗಿತ್ತು. ಇದೀಗ ಈ ಮಾರ್ಗದ ಚೆಕ್‌ಡ್ಯಾಂಗಳು ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಅವರು ಚಿಂಚಳ್ಳಿ ಗ್ರಾಮದಲ್ಲಿ ರೈತರು ಹಾಗೂ ಗ್ರಾಮಸ್ಥರ ಜತೆಗೂಡಿ ಬಾಗಿನ ಅರ್ಪಿಸಿದರು.
ಚಿಂಚಳ್ಳಿ ಗ್ರಾಮಕ್ಕೆ ಆಗಮಿಸಿದ ಶಾಸಕರನ್ನು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡು ವಾದ್ಯಮೇಳದೊಂದಿಗೆ ಮೆರವಣಿಗೆಯ ಮೂಲಕ ಕರೆ ತಂದರು. ಈ ವೇಳೆ ಮಹಿಳೆಯರು ಶಾಸಕರಿಗೆ ಆರತಿ ಬೆಳಗಿಸಿ, ತಿಲಕವಿಟ್ಟು ಸಂತಸ ವ್ಯಕ್ತಪಡಿಸಿದರು. ಗ್ರಾಮಸ್ಥರು ಜೈಕಾರ ಮೊಳಗಿಸುತ್ತಾ ಪಟಾಕಿ ಸಿಡಿಸಿ ಸಂತಸಪಟ್ಟರು.
ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ರಾಮಾಪುರ ಮಠದ ಶ್ರೀ ಬಸವಣ್ಣ ಸ್ವಾಮೀಜಿ, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಜಿಪಂ ಮಾಜಿ ಸದಸ್ಯ ನಾಗೇಂದ್ರಬಾಬು, ಶಾಗ್ಯ ರವಿ, ಪಿಎಸಿಸಿ ನಿರ್ದೇಶಕ ಮಂಜೇಶ್, ನಿವೃತ್ತ ಕೃಷಿ ವಿಜ್ಞಾನಿ ಡಾ. ನಿರಂಜನ್‌ಮೂರ್ತಿ, ಮುಖಂಡರಾದ ಅಂಜುಮ್ ಪಾಷ, ರಾಜುಗೌಡ, ತಿರುಪತಿ, ತಂಗವೇಲು, ಶಂಕರಪ್ಪಮ ನಿಂಗಶೆಟ್ಟಿ, ಪಳನಿಸ್ವಾಮಿ ಹಾಗೂ ಇತರರಿದ್ದರು.