ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ಪುಟಾಣಿಗಳು ಮಳೆರಾಯನಿಗಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷವಾಗಿ ಮೆರವಣಿಗೆ ನಡೆಸಿದರು.
- ಬೇವಿನ ಸೊಪ್ಪು ಕಟ್ಟಿಕೊಂಡು ಮೆರವಣಿಗೆ
ಹನೂರು: ತಾಲೂಕಿನ ರಾಮಾಪುರ ಹೋಬಳಿಯ ಕೆಂಪಯ್ಯನಹಟ್ಟಿ ಗ್ರಾಮದ ಪುಟಾಣಿಗಳು ಭಾನುವಾರ ಗ್ರಾಮಸ್ಥರ ಸಮ್ಮುಖದಲ್ಲಿ ಮಳೆಗಾಗಿ ಕಪ್ಪೆಗೆ ವಿಶೇಷ ಪೂಜೆ ಸಲ್ಲಿಸಿ ಬೇವಿನ ಸೊಪ್ಪನ್ನು ಕಟ್ಟಿಕೊಂಡು ಮೆರವಣಿಗೆ ನಡೆಸಿದ್ದು ಎಲ್ಲರ ಗಮನ ಸೆಳೆಯಿತು.
ಬೇಸಿಗೆ ಹಿನ್ನೆಲೆ ಹಾಗೂ ಸುಡುವ ಬಿಸಿಲಿಗೆ ಈ ಭಾಗದಲ್ಲಿನ ಕೆರೆ, ಕಟ್ಟೆಗಳು ಬತ್ತಿಹೋಗಿದ್ದು, ಜನರು ಬಿಸಿಲಿಗೆ ಹೈರಾಣರಾಗಿದ್ದಾರೆ. ಬರಗಾಲದ ಛಾಯೆ ಆವರಿಸಿದೆ. ಇದರಿಂದ ಜನ, ಜಾನುವಾರುಗಳು ಹಾಗೂ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹಾಗಾಗಿ ಗ್ರಾಮದ ಪುಟಾಣಿಗಳು ಮಳೆಗಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ಬೇವಿನ ಸೊಪ್ಪನ್ನು ಕಟ್ಟಿಕೊಂಡು ಕಪ್ಪೆಗೆ ವಿಶೇಷ ಪೂಜೆ ಸಲ್ಲಿಸಿ ಅದನ್ನು ಹೊತ್ತು ವಾದ್ಯಮೇಳದೊಂದಿಗೆ ಗ್ರಾಮದಿಂದ ದೊಡ್ಡಾಲತ್ತೂರು ಗ್ರಾಮದವರೆಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಪುಟಾಣಿಗಳು ಬಾರೋ ಬಾರೋ ಮಳೆರಾಯ ಎನ್ನುವ ಹಾಡು ಹಾಡುತ್ತ ಹೆಜ್ಜೆ ಹಾಕುವ ಮೂಲಕ ನೆರೆದಿದ್ದವರ ಗಮನ ಸೆಳೆದರು. ಗ್ರಾಮಸ್ಥರು ಪುಟಾಣಿಗಳ ಮೈಮೇಲೆ ನೀರು ಸುರಿದು ಮಳೆ ಬರಲಿ ಎಂದು ಆಶಿಸಿದರು. ಪುಟಾಣಿಗಳ ಈ ಕಾಳಜಿ ಮೆಚ್ಚುಗೆಗೆ ಪಾತ್ರವಾಯಿತು.
ಈ ಭಾಗದಲ್ಲಿ ನೀರಾವರಿ ಯೋಜನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದ ಗ್ರಾಮದ ಪುಟಾಣಿ ವರ್ಣಿಕಾ ಮಾತನಾಡಿ, ಈ ಭಾಗದಲ್ಲಿ 8 ವರ್ಷಗಳಿಂದ ಸಮರ್ಪಕ ಮಳೆಯಾಗದ ಪರಿಣಾಮ ಕೆರೆ-ಕಟ್ಟೆಗಳು ಬತ್ತಿ ಹೋಗಿವೆ. ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ದನಕರುಗಳು, ಪ್ರಾಣಿ ಪಕ್ಷಿಗಳು ನೀರಿಗಾಗಿ ತುಂಬಾ ತೊಂದರೆ ಪಡುತ್ತಿವೆ. ಈ ಹಿಂದೆ ಹಿರಿಯರು ಮಳೆಗಾಗಿ ಈ ರೀತಿಯ ಮೆರವಣಿಗೆಯನ್ನು ನಡೆಸುತ್ತಿದ್ದರು. ಹಾಗಾಗಿ ನಾವು ಸಹ ಮಳೆರಾಯ ಬರಲಿ ಎಂದು ಪ್ರಾರ್ಥಿಸಿ ಮೆರವಣಿಗೆ ಕೈಗೊಂಡಿದ್ದೇವೆ ಎಂದು ತಿಳಿಸಿದರು.