ಹನೂರು ತಾಲೂಕಿನ ಕಕ್ಕೆಹೊಲದಲ್ಲಿ ಸೆರೆ ಸಿಕ್ಕ ತಾಯಿ ಚಿರತೆ
- ಅಂದು ಹುಲಿ, ಈಗ ಚಿರತೆ ಕಾಯುವಿಕೆ
- ಕಕ್ಕೆಹೊಲದಲ್ಲಿ ಸೆರೆ ಸಿಕ್ಕಿ ತಾಯಿ ಚಿರತೆ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ತೀರ್ಮಾನ
ಚಾಮರಾಜನಗರ: ಆಹಾರ ಹುಡುಕಲು ಮಕ್ಕಳನ್ನು ಬಿಟ್ಟು ಬಂದಿದ್ದ ಅಮ್ಮ ಬಂಧಿಯಾಗಿ ಕುಳಿತಳು. ಹೆತ್ತವಳ ಹುಡುಕಾಟದಲ್ಲಿ ಕರುಳ ಬಳ್ಳಿಗಳು ಸೋತು ಹೋದವು. ಪರಿಣಾಮ ಈಗ ಅಮ್ಮ ಮತ್ತು ಮಕ್ಕಳು ದೂರವಾಗುವ ಸಮಯ ಹತ್ತಿರ ಬಂದಿದೆ.
ಇದು ಮನುಷ್ಯರಿಗೆ ಸಂಬಂಧಿಸಿದ ಸಂಗತಿಯಲ್ಲ. ಬದಲಿಗೆ ಚಿರತೆ ಮತ್ತು ಅದರ ಮೂರು ಮರಿಗಳ ವಾತ್ಸಾಲ್ಯ ಕಡಿದುಹೋಗುತ್ತಿರುವ ವಿಚಾರ. ಹನೂರು ತಾಲೂಕಿನ, ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪೊನ್ನಾಚಿ ಸಮೀಪದ ಕಕ್ಕೆಹೊಲದಲ್ಲಿ ಜೂ.19ರಂದು ರಾತ್ರಿ ಇಟ್ಟಿದ್ದ ಬೋನಿನಲ್ಲಿ ಹೆಣ್ಣು ಚಿರತೆ ಸೆರೆ ಸಿಕ್ಕಿತು. ಈ ಚಿರತೆಗೆ ಮೂರು ಮರಿಗಳಿದ್ದ ಕಾರಣ ಪುನರ್ವಸತಿ ಕೇಂದ್ರ ಅಥವಾ ಕಾಡಿಗೆ ಬಿಟ್ಟಿರಲಿಲ್ಲ. ಬೋನಿಗೆ ಬಿದ್ದಿರುವ ತಾಯಿಯನ್ನು ಮರಿಗಳು ಹುಡುಕೊಂಡು ಬರಬಹುದು ಎಂದು ಕಾಯಲಾಗುತ್ತಿತ್ತು. ಆದರೆ ಮರಿಗಳು ತಾಯಿಯ ಜಾಡು ಹಿಡಿದುಬರುವಲ್ಲಿ ಸೋತಿವೆ. ಹಾಗಾಗಿ ಅರಣ್ಯ ಇಲಾಖೆ ಇನ್ನಷ್ಟು ದಿನ ಕಾಯದೆ ಚಿರತೆಯನ್ನು ಸ್ಥಳಾಂತರ ಮಾಡಲು ತೀರ್ಮಾನ ಮಾಡಿದೆ.
ಹುಲಿಗೂ ಮಕ್ಕಳು ಸಿಗಲಿಲ್ಲ: ಜಿಲ್ಲೆಯಲ್ಲಿ ತಾಯಿ-ಮಕ್ಕಳು ದೂರವಾಗುವ ಕಟು ಪ್ರಸಂಗ ಚಿರತೆಗಷ್ಟೇ ಅಲ್ಲದೆ, ಹುಲಿಗೂ ಎದುರಾಗಿರುವ ಇತಿಹಾಸವಿದೆ. ಕೆಲವು ದಿನಗಳ ಹಿಂದೆ ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದ ಸುತ್ತಮುತ್ತ ಐದು ಹುಲಿಗಳು ಕಾಣಿಸಿಕೊಂಡು ದೊಡ್ಡಮಟ್ಟದಲ್ಲಿ ಭಯ ಸೃಷ್ಟಿ ಮಾಡಿದ್ದವು. ಇವುಗಳನ್ನು ಸೆರೆ ಹಿಡಿಯಲು ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿ ಆನೆಮಡುವಿನ ಕೆರೆಯ ಬಳಿ ಬೋನು ಇಟ್ಟಿತ್ತು. ಇದರೊಳಗೆ ಒಂದು ಹುಲಿ ಸೆರೆಯಾಯಿತು. ಬಂಧಿಯಾದ 7 ವರ್ಷದ ಹುಲಿ ತಾಯಿ ಮತ್ತು ಇದಕ್ಕೆ ನಾಲ್ಕು ಮರಿಗಳಿವೆ ಎಂದು ಅರಣ್ಯ ಇಲಾಖೆಗೆ ಗೊತ್ತಾಯಿತು. ಹಾಗಾಗಿ ತಾಯಿ ಹುಲಿಯನ್ನು ಸ್ಥಳಾಂತರ ಮಾಡದೆ ಬೋನಿನಲ್ಲೇ ಇಟ್ಟು ಮರಿಗಳಿಗಾಗಿ ಕಾಯಲಾಯಿತು. ಆದರೆ ಮರಿ ಹುಲಿಗಳು ತಾಯಿ ಇದ್ದ ಸ್ಥಳಕ್ಕೆ ಬರಲಿಲ್ಲ. ಕೊನೆಗೆ ಹುಲಿಯನ್ನು ಬನ್ನೇರುಘಟ್ಟದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಯಿತು. ನಂತರದ ದಿನಗಳಲ್ಲಿ ಮೂರು ಹುಲಿ ಮರಿಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಸೆರೆ ಸಿಕ್ಕವು. ಇವುಗಳನ್ನು ಕಾಡಿಗೆ ಬಿಡಲಾಯಿತು. ಇನ್ನೊಂದು ಮರಿ ಹುಲಿಯನ್ನು ಸೆರೆ ಹಿಡಿಯಲು ಸಾಕಾನೆ ಬಳಿಸಿ ಕಾರ್ಯಾಚರಣೆ ನಡೆಸಿದರೂ ಸಿಗಲಿಲ್ಲ. ಇದು ಈಗಲೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದೆ.
ಪಾಲನೆಯಿಂದ ವಂಚಿತರಾದ ಮಕ್ಕಳು:
ಸಕಲ ಜೀವಿಗಳಿಗೂ ತಾಯಿ ಪ್ರೀತಿ ಒಂದೇ ಆಗಿದೆ. ತಾಯಿ ಚಿರತೆ ಅಥವಾ ಹುಲಿಗಳಿಂದ ಬೇರೆಯಾಗುವ ಮರಿಗಳು ಮಾತೃ ಲಾಲನೆ ಮತ್ತು ಪಾಲನೆಯಿಂದ ವಂಚಿತರಾಗುತ್ತವೆ. ಸುಮಾರು 1 ವರ್ಷದವರೆಗೆ ಮರಿಗಳನ್ನು ಜತೆಗೆ ಇಟ್ಟುಕೊಂಡು ತಾಯಿ ಕಾಪಾಡುತ್ತಾಳೆ. ಕಾಡಿನಲ್ಲಿ ಬೇರೆ ಬಲಿಷ್ಠ ಪ್ರಾಣಿಗಳಿಂದ ರಕ್ಷಣೆ ಮಾಡಿ, ಆಹಾರಕ್ಕಾಗಿ ಬೇಟೆಯಾಡುವುದನ್ನು ಕಲಿಸುತ್ತಾಳೆ. ಈ ಸಂದರ್ಭದಲ್ಲಿ ಮರಿಗಳು ತಾಯಿಯಿಂದ ದೂರವಾದರೆ ಸಂಕಷ್ಟಕ್ಕೆ ಸಿಲುಕುತ್ತವೆ.
ಸ್ವಾಭಾವಿಕ ರಕ್ಷಣೆಯ ಯಶೋಗಾಥೆ:
2021ರಲ್ಲಿ ಬಂಡೀಪುರದ ಯಡಿಯಾಲದಲ್ಲಿ ತಾಯಿ ಹುಲಿಯಿಂದ ಬೇರ್ಪಟ್ಟಿದ್ದ ಮೂರು ಮರಿಗಳು ಆಹಾರವಿಲ್ಲದೆ ಹಸಿವಿನಿಂದ ನಿತ್ರಾಣಗೊಂಡು ಸತ್ತಿದ್ದವು. ಆದರೆ ಈ 4 ಮರಿ ಹುಲಿಗಳ ವಿಚಾರದಲ್ಲಿ ಈ ರೀತಿ ಆಗಲಿಲ್ಲ. ತಾಯಿ ಬಿಟ್ಟು ಹೋದಾಗ ಸಿಗುವ ಮರಿಗಳ ರಕ್ಷಣೆ ಅರಣ್ಯ ಇಲಾಖೆ ಜವಾಬ್ದಾರಿಯಾಗಿರುತ್ತದೆ. ಇವುಗಳನ್ನು ಸಾಮಾನ್ಯವಾಗಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಆದರೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹುಲಿ ಮರಿಗಳ ಸ್ವಾಭಾವಿಕ ರಕ್ಷಣೆಯ ಯಶೋಗಾಥೆಯೊಂದು ತನ್ನತ್ತ ಗಮನ ಸೆಳೆಯುತ್ತಲೇ ಇದೆ. ಕಳೆದ ತಿಂಗಳು ಬಂಡೀಪುರ ಕಾಡಿನಲ್ಲಿ 4 ಮರಿಗಳನ್ನು ಬಿಟ್ಟು ತಾಯಿ ಹುಲಿ ಕಣ್ಮರೆಯಾಯಿತು. ಇದರ ಹುಡುಕಾಟಕ್ಕಿಳಿದ ಅರಣ್ಯ ಇಲಾಖೆಯ ಪ್ರಯತ್ನ ಸಲವಾಗಲಿಲ್ಲ. ಅಂತಿಮವಾಗಿ ತಾಯಿ ಇಲ್ಲದ ತಬ್ಬಲಿಗಳನ್ನು ಅರಣ್ಯ ಇಲಾಖೆಯಿಂದ ಸ್ವಾಭಾವಿಕವಾಗಿ ರಕ್ಷಣೆ ಮಾಡಲಾಯಿತು. ಅಂದರೆ 4 ಮರಿ ಹುಲಿಗಳನ್ನು ಕಾಡಿನಲ್ಲಿ ಒಂದೆಡೆ ಇಟ್ಟು ಅವುಗಳಿಗೆ ಆಹಾರ ನೀಡಿ, ಡ್ರೋಣ್ ನಿಗಾವಣೆಯಲ್ಲಿ ಸಂರಕ್ಷಣೆ ಮಾಡಿ ಸಹಜ ಜೀವನದಲ್ಲೇ ಬೆಳೆಯುವಂತೆ ಮಾಡಿತು. ಬಳಿಕ ಹುಲಿ ಮರಿಗಳು ಸ್ವತಂತ್ರವಾಗಿ ಬದುಕುವ ಸಾಮರ್ಥ್ಯ ಬೆಳೆಸಿಕೊಂಡಿವೆ. ಒಂದು ಹುಲಿ ಈಗಾಗಲೇ ತನ್ನ ಗಡಿಯನ್ನು ಗುರುತಿಸಿಕೊಂಡು ಹೋಗಿದೆ.
ಕಕ್ಕೆಹೊಲದಲ್ಲಿ ಸೆರೆ ಸಿಕ್ಕಿ ತಾಯಿ ಚಿರತೆಯನ್ನು ಹುಡುಕಿಕೊಂಡು ಮೂರು ಮರಿಗಳು ಬರುತ್ತವೆ ಎಂದು ಇಷ್ಟು ದಿನ ಕಾಯಲಾಯಿತು. ಆದರೆ ಮರಿಗಳು ಬಾರದ ಹಿನ್ನೆಲೆಯಲ್ಲಿ ತಾಯಿ ಚಿರತೆಯನ್ನು ಸ್ಥಳಾಂತರ ಮಾಡಲು ನಿರ್ಧರ ಮಾಡಲಾಗುತ್ತದೆ.
ಭಾಸ್ಕರ್, ಡಿಸಿಎ್, ಮಲೆ ಮಹದೇಶ್ವರ ವನ್ಯಜೀವಿಧಾಮ, ಕೊಳ್ಳೇಗಾಲ