- ನಾಳೆ ಸಚಿವ ಎಚ್.ಸಿ. ಮಹದೇವಪ್ಪ ಭೇಟಿ
ಕೊಳ್ಳೇಗಾಲ: ಚಿಕ್ಕಲ್ಲೂರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರು ಜ.4ರಂದು ಭೇಟಿ ನೀಡಲಿದ್ದಾರೆ ಎಂದು ಸಚಿವ ಎಚ್.ಸಿ ಮಹದೇವಪ್ಪ ಅಭಿಮಾನಿ ಬಳಗದ ಅಧ್ಯಕ್ಷ ವಿ.ಎನ್.ಮಹದೇವಯ್ಯ ಹೇಳಿದರು.
ಈಗಾಗಲೇ ಶ್ರೀ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಗಿದೆ. ಜ.3 ರಿಂದ 7 ರವರಗೆ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆ ನಡೆಯಲಿದೆ. ಹಾಗಾಗಿ ಜ.4ರಂದು ಚಿಕ್ಕಲ್ಲೂರಿಗೆ ಸಚಿವ ಎಚ್.ಸಿ ಮಹದೇವಪ್ಪ ಭೇಟಿ ನೀಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾರ್ವಜನಿಕರು, ಭಕ್ತರು, ಹೋರಾಟಗಾರರ ಕೋರಿಕೆ ಮೇರೆಗೆ ಶ್ರೀ ಚಿಕ್ಕಲ್ಲೂರು ಕ್ಷೇತ್ರದಲ್ಲಿರುವ ಮೂಲ ಸೌಕರ್ಯವನ್ನು ವೀಕ್ಷಣೆ ಮಾಡಲಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಕ್ಷೇತ್ರಕ್ಕೆ ಸಚಿವರು ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಶ್ರೀ ಮಂಟೇಸ್ವಾಮಿ ಪರಂಪರೆ ಹಿತರಕ್ಷಣಾ ಸಮಿತಿ ಸಂಶೋಧಕ ಮಹದೇವ ಶಂಕನಪುರ ಮಾತನಾಡಿ, ಶ್ರೀ ಮಂಟೇಸ್ವಾಮಿ ನೀಲಗಾರ ಪರಂಪರೆ ಕರ್ನಾಟಕ ರಾಜ್ಯದ ವಿಶಿಷ್ಟ ಜಾತ್ರೆ ಮತ್ತು ಸಂಸ್ಕೃತಿಯಾಗಿದೆ. ಭಾರತದ ಸಂವಿಧಾನದ ಆಶಯಗಳನ್ನು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಈ ಪರಂಪರೆ ಪ್ರತಿಪಾದಿಸುತ್ತದೆ. ಈ ಪರಂಪರೆಯ ಭಕ್ತರ ಆಚರಣೆಗಳು ಮುಂದಿನ ಸಮಾಜಕ್ಕೂ ಮಾದರಿಯಾಗಿದೆ ಎಂದು ತಿಳಿಸಿದರು.
ಶ್ರೀ ಮಂಟೇಸ್ವಾಮಿ ಪರಂಪರೆ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಶುಂಭುಲಿಂಗಸ್ವಾಮಿ, ಮರಿಸ್ವಾಮಿ ಚಾಟೀಪುರ ಇದ್ದರು.