ಗುಂಡ್ಲುಪೇಟೆ ತಾಲೂಕಿನ ಕಡತಾಳಕಟ್ಟೆಹುಂಡಿ ಗ್ರಾಮದಲ್ಲಿ ಪ್ರಾತ್ಯಕ್ಷಿಕೆಯನ್ನು ಶ್ರೀರೂಪಾ ವೀಕ್ಷಿಸಿದರು. ಹೊನ್ನೂರು ಪ್ರಕಾಶ್, ಸ್ನೇಹಾರಾಜ್, ಕೆ.ಎಂ.ಮಹೇಶ್, ಭಾಸ್ಕರ್ ನಾಯಕ್ ಇದ್ದರು. 
ಚಾಮರಾಜನಗರ

ಸ್ವಸ್ಥ ಸಮಾಜಕ್ಕೆ ರಾಸಾಯನಿಕಮುಕ್ತ ಬೆಳೆಗಳು ಅವಶ್ಯಕ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಶ್ರೀರೂಪಾ
  • ಕಡತಾಳಕಟ್ಟೆಹುಂಡಿ ಗ್ರಾಮದ ಮಹದೇವಪ್ರಸಾದ್
  • ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರುಸೇನೆ
ಗುಂಡ್ಲುಪೇಟೆ: ಸಮಾಜದ ಸ್ವಾಸ್ಥ್ಯಕ್ಕಾಗಿ ರಾಸಾಯನಿಕಮುಕ್ತ ಬೆಳೆಗಳ ಅವಶ್ಯಕತೆ ಹೆಚ್ಚಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಪ್ರತಿಪಾದಿಸಿದರು.
ತಾಲೂಕಿನ ಕಡತಾಳಕಟ್ಟೆಹುಂಡಿ ಗ್ರಾಮದ ಮಹದೇವಪ್ರಸಾದ್ ಅವರ ಜಮೀನಿನಲ್ಲಿ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಶನಿವಾರ ಆಯೋಜಿಸಿದ್ದ ರೈತರ ಗುಂಪುಬೇಸಾಯ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ರಾಸಾಯನಿಕಮುಕ್ತ ಬಿತ್ತನೆ ಮಾಡಿ ಮಾತನಾಡಿದರು.
ಕರೋನಾ ಸಂದರ್ಭದಲ್ಲಿ ಪ್ರತಿಯೊಬ್ಬರೂ ಪಾಠ ಕಲಿತಿದ್ದಾರೆ. ಊರು ಬಿಟ್ಟು ಪಟ್ಟಣಕ್ಕೆ ಹೋಗಿದ್ದವರು ಸ್ವಗ್ರಾಮಗಳಿಗೆ ಮರಳಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಯಿದ್ದು, ಇದರಿಂದ ಬೆಳೆಗಾರರಿಗೆ ಲಾಭವಾಗಲಿದೆ. ಹೆಚ್ಚಿನವರು ಸಂಪೂರ್ಣ ಸಾವಯವ ಮತ್ತು ನಾಟಿ ಹಸುಗಳ ಉತ್ಪನ್ನಗಳನ್ನು ಬಳಕೆ ಮಾಡಲು ಆರಂಭಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಗುಂಪುಬೇಸಾಯ ಪದ್ದತಿ ಉತ್ತಮ ಪರಿಣಾಮ ಬೀರಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮೂಹಿಕ ನಾಯಕತ್ವದ ರಾಜ್ಯ ಸಮಿತಿ ಸದಸ್ಯ ಹೊನ್ನೂರು ಪ್ರಕಾಶ್ ಮಾತನಾಡಿ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಆಶಯದಂತೆ ಗುಂಪುಬೇಸಾಯ ಪದ್ಧತಿಯಡಿ ಬೆಳೆ ಬೆಳೆಯಲಾಗುತ್ತಿದೆ. ಪ್ರತಿ ಗ್ರಾಮದಲ್ಲಿ ಸಂಘದ ಆಯ್ದ 5 ರೈತರ ಜಮೀನುಗಳಲ್ಲಿ 20 ಗುಂಟೆ ಪ್ರದೇಶದಲ್ಲಿ ರಾಸಾಯನಿಕ ಮುಕ್ತ ಹಾಗೂ ಸಾವಯವ ಪದ್ಧತಿಯಡಿ ಗುಂಪಾಗಿ ಬೇಸಾಯ ಮಾಡಲಾಗುವುದು. ಇದರಲ್ಲಿ ಕಬ್ಬು, ಬಾಳೆ, ಅರಿಷಿಣ, ಸೊಪ್ಪು ತರಕಾರಿ ಮುಂತಾದ ಬೆಳೆಗಳನ್ನು ಬೆಳೆಯುವ ಮೂಲಕ ಬಳಕೆದಾರರಿಗೆ ವಿಷಮುಕ್ತ ಆಹಾರ ನೀಡಲಾಗುವುದು. ಬೆಳೆದ ಅರ್ಧದಷ್ಟೃ ಬೆಳೆಗಳನ್ನು ಉತ್ಪಾದಕರು ಇಟ್ಟುಕೊಂಡು ಉಳಿದರ್ಧ ಉತ್ಪನ್ನಗಳನ್ನು ರೈತ ಉತ್ಪನ್ನ ಕಂಪನಿಗೆ ಸರಬರಾಜು ಮಾಡಬೇಕಾಗಿದೆ. ಇದರಲ್ಲಿ ಈ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಜತೆಗೆ ಬೆಳೆಗಾರರಿಗೆ ಹೆಚ್ಚಿನ ಲಾಭ ದೊರಕುವಂತೆ ಮಾಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕಿ ಸುಷ್ಮಾ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಡಿವೈಎಸ್‌ಪಿ ಸ್ನೇಹಾರಾಜ್, ತೆರಕಣಾಂಬಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕೆ.ಎಂ.ಮಹೇಶ್ ಸೇರಿದಂತೆ ಹಲವರು ಇದ್ದರು.