ಹನೂರು ತಾಲೂಕು ತಾಳುಬೆಟ್ಟ ಮಾರ್ಗದ ರಂಗಸ್ವಾಮಿ ಒಡ್ಡುವಿನ ಕೊಳದ ಬಳಿ ಕಾಣಿಸಿಕೊಂಡ ಚಿರತೆ.
ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಾಳುಬೆಟ್ಟ ಮಾರ್ಗದ ರಂಗಸ್ವಾಮಿ ಒಡ್ಡು ಸಮೀಪದ ಕೊಳದ ಬಳಿ ಶನಿವಾರ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತರಿಗೆ ಚಿರತೆ ಕಾಣಿಸಿಕೊಂಡಿದ್ದು, ಆತಂಕವನ್ನು ಉಂಟು ಮಾಡಿದೆ.
ಕಳೆದ ಒಂದು ತಿಂಗಳ ಹಿಂದೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಭಕ್ತರೊಬ್ಬರನ್ನು ರಂಗಸ್ವಾಮಿ ಒಡ್ಡುವಿನ ಬಳಿ ಚಿರತೆ ಬಲಿ ಪಡೆದಿತ್ತು. ಜತೆಗೆ ಮಹಾ ಶಿವರಾತ್ರಿ ಜಾತ್ರಾ ವೇಳೆ ಪಾಲಕರೊಂದಿಗೆ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಈ ವೇಳೆ ಭಕ್ತರ ಸುರಕ್ಷತೆ ದೃಷ್ಠಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಮಾರ್ಗದಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಇಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ಸೆರೆಯಾಗಿರಲಿಲ್ಲ. ರಾತ್ರಿ ವೇಳೆ ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇತ್ತು. ಭಕ್ತರು ಆತಂಕಕ್ಕೆ ಒಳಗಾಗುತ್ತಲೇ ಇದ್ದರು.
ಮಾ.10 ರಂದು ಆನೆತಲೆ ದಿಂಬದ ಬಳಿ ಕಾರಿನಲ್ಲಿ ತೆರಳುತ್ತಿದ್ದ ಭಕ್ತರಿಗೆ ಚಿರತೆ ಕಾಣಿಸಿಕೊಂಡಿತ್ತು. ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಇದೀಗ ಯುಗಾದಿ ಜಾತ್ರೆ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ಮ.ಬೆಟ್ಟಕ್ಕೆ ತೆರಳುತ್ತಿದ್ದ ಕಾಲ್ನಡಿಗೆಯ ಭಕ್ತರಿಗೆ ರಂಗಸ್ವಾಮಿ ಒಡ್ಡುವಿನ ಕೊಳದ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ಈ ದೃಶ್ಯವನ್ನು ಭಕ್ತರೊಬ್ಬರೂ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಚಿರತೆಯಿಂದ ಭಕ್ತರಿಗೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮುತುರ್ವಜಿ ವಹಿಸಿ ಈ ಮಾರ್ಗದಲ್ಲಿ ಸಿಬ್ಬಂದಿಯನ್ನು ನಿಯೋಜಿಸಬೇಖು. ಚಿರತೆ ಸೆರೆ ಹಿಡಿಯಬೇಕು ಎಂದು ಭಕ್ತರು ಹಾಗೂ ಸಾರ್ವಜನಿಕರಿಂದ ತೀವ್ರ ಒತ್ತಾಯ ಕೇಳಿ ಬಂದಿದೆ.