ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದ ಗರ್ಭಗುಡಿಯನ್ನು ವಿಶೇಷ ಹೂಗಳಿಂದ ಅಲಂಕಾರ ಮಾಡಿರುವುದು.
- ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯ
- ನಡುಮಲೆಗೆ ಹರಿದು ಬಂದ ಭಕ್ತ ಸಾಗರ
ಚಾಮರಾಜನಗರ: ಹೆಜ್ಜೆ ಹೆಜ್ಜೆಗೂ ಮಾದಪ್ಪನ ಜಪ, ಸರತಿ ಸಾಲಿನಲ್ಲೂ ಉೇ ಮಾದಪ್ಪ ಎಂಬ ಜಯೋಷ ಮೊಳಗಿ ನಡುಮಲೆಯಲ್ಲಿ ತುಂಬೆಲ್ಲಾ ಭಕ್ತ ಸಾಗರವೇ ಕಂಡಿತು.
ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರದ ಅಮಾವಾಸ್ಯೆ ಪೂಜೆಗೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಹೊರಾವರಣದಲ್ಲಿ ಉರುಳು ಸೇವೆ ಮಾಡಿ ಸಮರ್ಪಿಸಿದ ಭಕ್ತಿ, ಗರಡುಗಂಬದ ಮುಂದೆ ನಿಂತು ಕುಟುಂಬ ಸಮೇತ ಕೈಮುಗಿದು ನಮಿಸಿದ ಗುಂಪುಗಳು, ಧೂಮ, ದೀಪ ಬೆಳಗಿ ಪ್ರಾರ್ಥನೆ ಸಲ್ಲಿಸಿದ ಮಹಿಳೆಯರು, ದಂಡಿನ ಕೋಲು ಹಿಡಿದು, ಉತ್ಸವಗಳಲ್ಲಿ ಪಾಲ್ಗೊಂಡ ಭಕ್ತರು ಅಮಾವಾಸ್ಯೆ ದಿನದ ಧಾರ್ಮಿಕ ಕೈಂಕರ್ಯವನ್ನು ಶ್ರದ್ಧೆಯಿಂದ ನಡೆಸಿದರು. ಹರಕೆ ಹೊತ್ತ ಭಕ್ತರು ಮುಡಿಸೇವೆ, ಉರುಳು ಸೇವೆ, ಪಂಜಿನ ಸೇವೆ, ರಜಾ ಹೊಡೆಯುವ ಸೇವೆಯನ್ನು ಕೈಗೊಂಡಿದ್ದರು. ದೇಗುಲದ ಸುತ್ತ ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನದ ಉತ್ಸವಾದಿ ಸೇವೆಗಳಲ್ಲಿ ಭಾಗಿಯಾಗಿದ್ದರು. ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಅಮಾವಾಸ್ಯೆ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಮಂಗಳವಾರದ ವಿಶೇಷವಲ್ಲದ ಅಮಾವಾಸ್ಯೆಯ ದಿನವೂ ಜನಜಂಗುಳಿ ಹೆಚ್ಚಾಗಿದ್ದು ವಿಶೇಷವಾಗಿತ್ತು. ಇದರಿಂದಾಗಿ ಸರತಿ ಸಾಲು ದೊಡ್ಡದಾಯಿತು. ಮಹದೇಶ್ವರರ ದರ್ಶನ ಪಡೆಯಲು ತುಂಬಾ ಸಮಯ ಹಿಡಿಯಿತು. ಅಸಮಾಧಾನಗೊಂಡ ಭಕ್ತರು ಬೇಸರ ಹೊರಹಾಕಿದರು.
ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆಗಳು ನಡೆದವು. ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸೋಮವಾರ ರಾತ್ರಿ ಮತ್ತು ಮಂಗಳವಾರ ಮುಂಜಾನೆ ದೇವಸ್ಥಾನಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಬೆಳಗ್ಗಿನ ಜಾವದ ಮೊದಲ ಪೂಜೆ ನೆರವೇರಿತು. ಎರಡನೇ ಪೂಜೆ 4ರಿಂದ 6 ಗಂಟೆಯವರೆಗೆ ನಡೆಯಿತು. ಅಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ನೈವೇದ್ಯ, ಆರತಿ ಬೆಳಗಿ ಎರಡನೇ ಪೂಜೆ ಮುಗಿಸಿದ ಬಳಿಕ ಭಕ್ತರಿಗೆ ಸ್ವಾಮಿಯ ದರ್ಶನ ನೀಡಲಾಯಿತು. ಸಂಜೆ ವೇಳೆಗೆ ಹುಲಿ, ಬಸವ, ರುದ್ರಾಕ್ಷಿ ವಾಹನಗಳ ಪ್ರಾಕಾರೋತ್ಸವ ನಡೆಯಿತು. ಇದೇ ವೇಳೆ ಹರಕೆ ಸೇವೆಗಳೂ ಸಹ ನಡೆದವು. ಸಂಜೆ ವೇಳೆಗೆ ನಡೆದ ಚಿನ್ನದ ತೇರಿನಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು. ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಹದೇಶ್ವರರಿಗೆ ವಿಶೇಷವಾಗಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ದೇಗುಲದ ಹೊರಗಿನ ಸರತಿ ಸಾಲಿನಲ್ಲಿ ಸ್ವಾಮಿಗೆ ಜೈಕಾರ ಹಾಕುತ್ತಾ ಸಾಗಿದ ಭಕ್ತರು ಗರ್ಭಗುಡಿಗೆ ಆಗಮಿಸಿ ಸ್ವಾಮಿಯ ದರ್ಶನ ಪಡೆಯುವಾಗ ಉೇ ಮಾದಪ್ಪ ಎಂದು ಕೂಗಿ ಭಕ್ತಿ ಮೆರೆದರು.
ನಾಗಮಲೆ ಬದಲು ಕೋಡುಗಲ್ಲಿಗೆ ಭೇಟಿ:
ನಾಗಮಲೆ ಪುಣ್ಯಕ್ಷೇತ್ರದಲ್ಲಿ ಬಾಲಭಕ್ತನ ಮೇಲೆ ಚಿರತೆ ದಾಳಿ ಮಾಡಿದ್ದ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಪಾದಯಾತ್ರೆಯಲ್ಲಿ ಪವಾಡ ಸ್ಥಳಗಳಿಗೆ ತೆರಳಲು ಬಯಸುವ ಭಕ್ತರು ಕೋಡುಗಲ್ಲು ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಮಲೆ ಮಹದೇಶ್ವರ ಬೆಟ್ಟದಿಂದ ಸುಮಾರು 3 ಕಿ.ಮೀ ದೂರದಲ್ಲಿ ಬೆಟ್ಟದ ಮೇಲಿರುವ ಕೋಡುಗಲ್ಲು ಮಾದಪ್ಪನ ಮಲೆಗಳಲ್ಲಿ ಒಂದಾಗಿದೆ. ಇದನ್ನು ಪುರಾಣ ಕಥೆಯ ಪ್ರಕಾರ ಶಿವಶರಣೆ ಸಂಕಮ್ಮನ ಬಳಿ ಮಹದೇಶ್ವರರು ಭಿಕ್ಷೆ ಕೇಳಿದ ಜಾಗ ಎಂದೇ ಹೇಳಲಾಗುತ್ತದೆ. ಅದಕ್ಕಾಗಿ ಜನಪದ ಕಥೆಗಳಲ್ಲಿ ‘ಕ್ವಾರಣ್ಯ ನೀಡವ್ವ ಕೋಡುಗಲ್ಲು ಮಹದೇವನಿಗೆ’ ಎಂಬ ಹಾಡು ರಚನೆಯಾಗಿದೆ. ಈ ಸ್ಥಳಕ್ಕೆ ಅಮವಾಸ್ಯೆ ದಿನವಾದ ಮಂಗಳವಾರ ಆಗಮಿಸಿದ ಭಕ್ತರು ಧೂಪ, ದೀಪ ಬೆಳಗಿದರು. ಕೋಡುಗಲ್ಲು ಕ್ಷೇತ್ರದ ಬೇಡಗಂಪಣ ಅರ್ಚಕರು ಸ್ವಾಮಿಗೆ ಅಭಿಷೇಕ ಮಾಡಿ ಭಕ್ತರಿಗೆ ತೀರ್ಥ, ಪ್ರಸಾದ ನೀಡಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಂಜಾನೆ ಮತ್ತು ರಾತ್ರಿ ವೇಳೆ ಮಲೆ ಮಹದೇಶ್ವರರಿಗೆ ಪಂಜಿನ ಸೇವೆ ನಡೆಯುತ್ತದೆ. ಪಂಜಿನ ಸೇವೆ ಎಂದರೆ ಮಹದೇಶ್ವರರಿಗೆ ಗರ್ಭದ ಅಂಕದಲ್ಲಿ ದೀವಟಿಗೆ ಪೂಜೆ ಮಾಡಲಾಗುತ್ತದೆ. ಈ ವೇಳೆ ಭಕ್ತರು ಬೆಂಕಿಯಲ್ಲಿ ಆರತಿ ಎತ್ತುವ ಹರಕೆಯನ್ನು ಹೊತ್ತು ಕೊಳ್ಳುತ್ತಾರೆ. ಬಿದಿರಿನ ಕಡ್ಡಿಯ ತುದಿಗೆ ಬಟ್ಟೆ ಕಟ್ಟಿ ಎಣ್ಣೆ ಹಚ್ಚಿ ಜ್ಯೋತಿ ಬೆಳಗುತ್ತಾ ದೇವಸ್ಥಾನದ ಸುತ್ತ ಮಾದಪ್ಪನಿಗೆ ಉೇ ಎನ್ನುತ್ತಾ ಸುತ್ತು ಹಾಕುತ್ತಾರೆ. ಈ ವೇಳೆ ಗಾಳಿಗೆ ಹಾರುತ್ತಿರುವ ಪಂಜಿನ ಬೆಂಕಿಯ ಕಿಡಿ ಉರುಳು ಸೇವೆ ಮಾಡುವ ಭಕ್ತರು, ಇತರರಿಗೆ ತೊಂದರೆಯಾಗುತ್ತಿದೆ ಎಂದು ಹಲವು ಭಕ್ತರು ತಿಳಿಸಿದ್ದಾರೆ.
ಸರತಿ ಸಾಲಿನಲ್ಲಿ ನೂಕುನುಗ್ಗಲು:
ಕ್ಷೇತ್ರಕ್ಕೆ ಅಪಾರ ಸಂಖ್ಯೆಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಸರತಿ ಸಾಲಿನಲ್ಲಿ ನೂಕು ನುಗ್ಗಲು ಉಂಟಾಯಿತು. ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ವಿಶೇಷ ದರ್ಶನದ ಕೌಂಟರ್‌ನಲ್ಲೂ ಭಕ್ತರು ಅಧಿಕ ಪ್ರಮಾಣದಲ್ಲಿದ್ದರು.
ಬಸ್‌ಗಳಲ್ಲಿ ಕಿಕ್ಕಿರಿದ ಪ್ರಯಾಣಿಕರು:
ಮಹದೇಶ್ವರ ಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹೋಗುವ ಭಕ್ತರು ಅಧಿಕವಾಗಿದ್ದರಿಂದ ಸಾರಿಗೆ ಪ್ರಯಾಣ ತ್ರಾಸದಾಯಕವಾಗಿತ್ತು. ಗುಂಡ್ಲುಪೇಟೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಸಿಗದೆ ಸಾರ್ವಜನಿಕರು ಪರದಾಡಿದರು. ಅಮಾವಾಸ್ಯೆ ಪ್ರಯುಕ್ತ ಹೆಚ್ಚುವರಿ ಬಸ್ ನಿಯೋಜನೆ ಮಾಡಬೇಕೆಂದು ಆಗ್ರಹಿಸಿದರು. ಕೊಳ್ಳೇಗಾಲ, ಹನೂರು ತಾಲೂಕುಗಳ ಬಸ್ ನಿಲ್ದಾಣಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು.