ಕಾಮಗೆರೆ ಗ್ರಾಮದಲ್ಲಿ ಗುರುವಾರ ರಾತ್ರಿ ಮಹಾಜ್ಯೋತಿಯನ್ನು ಬೆಳಗಿಸುವುದರ ಮೂಲಕ ಚಂದ್ರ ಮಂಡಲೋತ್ಸವವನ್ನು ಆಚರಿಸಲಾಯಿತು. 
ಚಾಮರಾಜನಗರ

ವಿಜೃಂಭಣೆಯಿಂದ ಜರುಗಿದ ಚಂದ್ರ ಮಂಡಲೋತ್ಸವ

ಹನೂರು: ಸಮೀಪದ ಕಾಮಗೆರೆ ಗ್ರಾಮದಲ್ಲಿ ಗುರುವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಂದ್ರ ಮಂಡಲೋತ್ಸವವು (ಮಹಾಜ್ಯೋತಿ) ವಿಜೃಂಭಣೆಯಿಂದ ಜರುಗಿತು.
ಚಂದ್ರ ಮಂಡಲೋತ್ಸವದ ಅಂಗವಾಗಿ ಗ್ರಾಮದ ಕೆರೆ ಏರಿಯ ಬಳಿಯಿರುವ ಶ್ರೀ ಮಹದೇಶ್ವರಸ್ವಾಮಿ ದೇಗುಲ, ದೊಡ್ಡಬೀದಿಯ ಸಿದ್ದಪ್ಪಾಜಿ ದೇಗುಲ ಸೇರಿದಂತೆ ಗ್ರಾಮದ ಬೀದಿಗಳನ್ನು ತಳಿರು, ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಗ್ರಾಮಸ್ಥರು ಕುರುಬನಕಟ್ಟೆ ಕಂಡಾಯವನ್ನು ಗ್ರಾಮಕ್ಕೆ ತಂದು ಅರ್ಚಕರಿಂದ ಪೂಜೆ ನೆರವೇರಿಸಿದರು. ಕಂಡಾಯಗಳನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ರಾತ್ರಿ 10ರ ವೇಳೆಯಲ್ಲಿ ಅರ್ಚಕರು ಶ್ರೀ ಮಹದೇಶ್ವರಸ್ವಾಮಿ ದೇಗುಲದ ಬಳಿಯ ಕೆರೆಗೆ ತೆರಳಿ ನೆರೆದಿದ್ದ ಸಾವಿರಾರು ಭಕ್ತರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಬಳಿಕ ಕಂಡಾಯ ಉತ್ಸವದ ಮೆರವಣಿಗೆಯು ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಮಹದೇಶ್ವರಸ್ವಾಮಿ ದೇಗುಲದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊರಟು ದೊಡ್ಡಬೀದಿಯಲ್ಲಿರುವ ಸಿದ್ದಪ್ಪಾಜಿ ದೇಗುಲ ತಲುಪಿತು. ಮೆರವಣಿಗೆಯಲ್ಲಿ ಯುವಕರು ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಈ ವೇಳೆ ಶಾಸಕ ಎಂ.ಆರ್ ಮಂಜುನಾಥ್ ಹಾಗೂ ಮಾಜಿ ಶಾಸಕಿ ಪರಿಮಳ ನಾಗಪ್ಪ ಭಾಗಿಯಾಗಿದ್ದರು.
ವಿಜೃಂಭಣೆಯ ಚಂದ್ರ ಮಂಡಲೋತ್ಸವ
ದೇಗುಲದ ಸಮೀಪದಲ್ಲಿ ಕಬ್ಬಿಣದ ಸಲಾಕೆ, ಪಂಜು ಹಾಗೂ ಬಿದಿರಿನ ಅಚ್ಚೆಗಳಿಂದ ಸುಮಾರು 30 ಅಡಿ ಎತ್ತರದಲ್ಲಿ ಸಿದ್ಧಪಡಿಸಿದ್ದ ಮಹಾಜ್ಯೋತಿಯನ್ನು ರಾತ್ರಿ 12ರ ಸುಮಾರಿಗೆ ಆಕಾಶದ ಎತ್ತರಕ್ಕೆ ಬೆಳಗಿಸಲಾಯಿತು. ನೆರೆದಿದ್ದ ಭಕ್ತರು ಚಂದ್ರ ಮಂಡಲೋತ್ಸವವನ್ನು ಕಣ್ತುಂಬಿಕೊಂಡರು. ಈ ವೇಳೆ ಭಕ್ತರು ಮಹಾಜ್ಯೋತಿಗೆ ಕಟ್ಟಿದ ಹಗ್ಗವನ್ನು ಜಯಘೋಷವನ್ನು ಕೂಗುತ್ತಾ ಎಳೆದರು. ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಕೊಳ್ಳೇಗಾಲ ಸೇರಿದಂತೆ ಹನೂರು, ಬಂಡಳ್ಳಿ, ಮಂಗಲ, ಕಣ್ಣೂರು, ಗುಂಡಾಪುರ, ಸಿಂಗಾನಲ್ಲೂರು, ದೊಡ್ಡಿಂದುವಾಡಿ ಸೇರಿದಂತೆ ಈ ಭಾಗದ ಇನ್ನಿತರೆ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ಕಂಡಾಯ ಉತ್ಸವ ಮೆರವಣಿಗೆ: ವಿವಿಧ ಕಡೆಗಳಿಂದ ಗ್ರಾಮಕ್ಕೆ ಆಗಮಿಸಿದ್ದ ಕಂಡಾಯಗಳಿಗೆ ಶುಕ್ರವಾರ ಬೆಳಗ್ಗೆ ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವರ ಗುಡ್ಡರು ವಾದ್ಯಮೇಳದೊಂದಿಗೆ ಕಂಡಾಯವನ್ನು ಹೊತ್ತು ಗ್ರಾಮದ ಬೀದಿಗಳಲ್ಲಿ ಸಂಚರಿಸಿದರು. ಈ ವೇಳೆ ಮಹಿಳೆಯರು ಕಂಡಾಯಕ್ಕೆ ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿದರು.