ಗುಂಡ್ಲುಪೇಟೆ ತಾಲೂಕಿನ ಕಲ್ಲಳ್ಳಿ ಸಮೀಪ ಮೇಕೆಯನ್ನು ಕೊಂದ ಹುಲಿ ಸೆರೆಗೆ ಒತ್ತಾಯಿಸಿ ಕೂಂಬಿಂಗ್ ನಡೆಸುತ್ತಿದ್ದ ಸ್ಥಳದಲ್ಲಿ ಜಮಾಯಿಸಿದ್ದ ಗ್ರಾಮಸ್ಥರು.  
ಚಾಮರಾಜನಗರ

ಹುಲಿ ದಾಳಿಗೆ ಎರಡು ಮೇಕೆ ಬಲಿ

ರವಿಕುಮಾರ್ ಪಿ. ಕೆ
ಗುಂಡ್ಲುಪೇಟೆ: ತಾಲೂಕಿನ ಕಲ್ಲಳ್ಳಿ ಗ್ರಾಮದಲ್ಲಿ ಹಸುವನ್ನು ಬಲಿ ಪಡೆದ ಹುಲಿ ಸೆರೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸುತ್ತಿದ್ದರೆ, ಮತ್ತೊಂದೆಡೆ ಅದೇ ಗ್ರಾಮದ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಗಳ ಮೇಲೆ ದಾಳಿ ಮಾಡಿದ ವ್ಯಾಘ್ರ ಎರಡು ಮೇಕೆಗಳನ್ನು ಬಲಿ ಪಡೆದಿದೆ.
ಕಳೆದ ವಾರ ಪರಮಾಪುರ ಸಮೀಪ ಕೂಂಬಿಂಗ್ ನಡೆಸುವಾಗ ಪಟಾಕಿ ಸಿಡಿಸಿದ್ದರಿಂದ ವಿಚಲಿತವಾದ ಹುಲಿ ನೆರೆಯ ಕಲ್ಲಳ್ಳಿ ಗ್ರಾಮದ ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನು ಕೊಂದು ಹಾಕಿತ್ತು. ಇದರಿಂದ ಹುಲಿಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರಿಂದ ಒತ್ತಾಯ ಹೆಚ್ಚಾದ ಹಿನ್ನೆಲೆಯಲ್ಲಿ ಬಫರ್ ವಲಯದ ಅರಣ್ಯಾಧಿಕಾರಿಗಳು ಹುಲಿಯ ಚಲನವಲನ ಪತ್ತೆಗೆ ಕ್ಯಾಮರಾ ಹಾಗೂ ಸೆರೆಹಿಡಿಯಲು ಬೋನು ಅಳವಡಿಸಿ ಸಾಕಾನೆ ಪಾರ್ಥಸಾರಥಿ ಜತೆ ಕೂಂಬಿಂಗ್ ಕಾರ್ಯ ಕೈಗೊಂಡಿದೆ.
ದಾಳಿಗೆ ಬಲಿಯಾಗಿ ಸಾವಿಗೀಡಾದ ಹಸುವಿನ ಕಳೇಬರದ ಸುತ್ತಲೂ ತುಮಕೂರು ಬೋನು ಅಳವಡಿಸಿ ಹುಲಿಯನ್ನು ಅದರೊಳಗೆ ಆಕರ್ಷಿಸಲು ಕ್ರಮಕೈಗೊಂಡಿದ್ದು ಸುತ್ತಲೂ 10 ಸಿಸಿ ಕ್ಯಾಮರಾ ಅಳವಡಿಸಿ ಚಲನವಲನದ ಮೇಲೆ ಕಣ್ಣಿಟ್ಟಿದ್ದರೂ ಹುಲಿ ಅತ್ತ ಸುಳಿದಿಲ್ಲ. ಅಲ್ಲದೆ ಥರ್ಮಲ್ ಡ್ರೋನ್ ಕ್ಯಾಮರಾ ಬಳಸಿ ಹುಲಿ ಪತ್ತೆಗೆ ಮುಂದಾಗಿದ್ದರೂ ಇತ್ತ ಹುಲಿ ಗ್ರಾಮದ ಮಹದೇವಪ್ಪ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಗಳ ಮೇಲೆ ದಾಳಿ ಮಾಡಿದೆ. ಘಟನೆಯಲ್ಲಿ ಒಂದು ಮೇಕೆ ಸಾವಿಗೀಡಾದರೆ, ಮತ್ತೊಂದನ್ನು ಹೊತ್ತೊಯ್ದಿದೆ.
ಕಾರ್ಯಾಚರಣೆ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಅರಣ್ಯ ಸಿಬ್ಬಂದಿ ಸಾಕಾನೆ ನೆರವಿನಿಂದ ಕೂಂಬಿಂಗ್ ನಡೆಸಿದರು. ಪೊದೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ಅಡಗಿರುವ ಹುಲಿ ಪತ್ತೆಗೆ ಡ್ರೋನ್ ಹಾರಿಸಿದರೂ ಜಾಡು ಪತ್ತೆಯಾಗಿಲ್ಲ. ಸ್ಥಳದಲ್ಲಿ ಸುತ್ತಮುತ್ತಲಿನ ಗ್ರಾಮಗಳ ರೈತರು ಜಮಾಯಿಸಿ ಹುಲಿ ಸೆರೆಗೆ ಒತ್ತಾಯಿಸಿದರು. ಬೇಗೂರು ಪೊಲೀಸರು ಜನರು ಕಾರ್ಯಾಚರಣೆ ಸ್ಥಳದ ಹತ್ತಿರಕ್ಕೆ ಹೋಗದಂತೆ ಬಂದೋಬಸ್ತ್ ಆಯೋಜಿಸಿದ್ದರು.