ಚಾಮರಾಜನಗರದ ಅಭ್ಯಾಸಿ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರವನ್ನು ಯಳಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ಹಾಗೂ ಕೊಳ್ಳೇಗಾಲ ಅಕ್ಷರ ದಾಸೋಹ ಪ್ರಭಾರ ಸಹಾಯಕ ನಿರ್ದೇಶಕ ಆರ್.ನಂಜುಂಡಯ್ಯ ಉದ್ಘಾಟಿಸಿದರು. ಎ.ಎಂ. ನಾಗಮಲ್ಲಪ್ಪ, ಕಿರಣ್ ಗಿರ್ಗಿ, ರೆವರೆಂಡ್ ಪ್ರಕಾಶ್ ದಾಸರ್, ಎಸ್.ರಾಜು, ನಂದಿನಿ ರವಿಕುಮಾರ್, ಯಡಿಯೂರು ನಾಗರಾಜ್, ಮಹಮ್ಮದ್ ಗೌಸ್ ಇತರರು ಇದ್ದರು.
- ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರ
- ಶಿಬಿರವು ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆ
ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳು ಆರ್ಥಿಕವಾಗಿ ಬಡವರಾಗಿದ್ದರೂ ಪ್ರತಿಭೆಯಲ್ಲಿ ಅತ್ಯಂತ ಶ್ರೀಮಂತರು ಎಂದು ಯಳಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ಹಾಗೂ ಕೊಳ್ಳೇಗಾಲ ಅಕ್ಷರ ದಾಸೋಹ ಪ್ರಭಾರ ಸಹಾಯಕ ನಿರ್ದೇಶಕ ಆರ್.ನಂಜುಂಡಯ್ಯ ಹೇಳಿದರು.
ನಗರದ ಅಭ್ಯಾಸಿ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ಚಾಮರಾಜನಗರ ಜನಪದ ಕಲೆಗಳ ತವರೂರು ಎಂದೇ ಪ್ರಸಿದ್ಧಿ ಪಡೆದಿದೆ. ಅನೇಕ ಸಾಧಕರನ್ನು ನಾಡಿಗೆ ನೀಡಿರುವ ಜಿಲ್ಲೆಯಲ್ಲಿ ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರವು ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆಯಾಗಲಿದೆ. ಗ್ರಾಮೀಣ ಭಾಗದ ಮಕ್ಕಳು ಆರ್ಥಿಕವಾಗಿ ಬಡವರಾಗಿದ್ದರೂ ಪ್ರತಿಭೆಯಲ್ಲಿ ಅತ್ಯಂತ ಶ್ರೀಮಂತರಾಗಿದ್ದಾರೆ. ಮಕ್ಕಳ ಕುತೂಹಲವನ್ನು, ಪ್ರಶ್ನಿಸುವ ಮನೋಭಾವವನ್ನು ಹೆಚ್ಚಿಸುವುದಕ್ಕೆ ಇಂತಹ ಶಿಬಿರ ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎ.ಎಂ. ನಾಗಮಲ್ಲಪ್ಪ ಮಾತನಾಡಿ, ವಿವಿಧ ಸಂಸ್ಕಾರ, ಸಮುದಾಯ, ಗ್ರಾಮಗಳಿಂದ ಬಂದಿರುವ ಮಕ್ಕಳಿಗೆ ರಂಗ ಶಿಬಿರಗಳಿಂದ ಸಹಬಾಳ್ವೆ, ಪರಸ್ಪರ ಹೊಂದಾಣಿಕೆಯ ಕಲಿಕೆ ಉಂಟಾಗುತ್ತದೆ. ಇದರಿಂದ ಸಾಮಾಜಿಕ ಮೌಲ್ಯಗಳು ಮಕ್ಕಳಿಗೆ ಮೈಗೂಡುತ್ತವೆ. ನಾಗಾಲೋಟದಂತೆ ಸಾಗುತ್ತಿರುವ ಜೀವನಕ್ರಮ ಮತ್ತು ತಂತ್ರಜ್ಞಾನದ ಯುಗದಲ್ಲಿ ಮಕ್ಕಳಿಗೆ ಹಳ್ಳಿ ಸಂಸ್ಕೃತಿಯನ್ನು ತಿಳಿಸುವ ಶಿಬಿರ ಇದಾಗಲಿ ಎಂದರು. ಶಿಬಿರದ ನಿರ್ದೇಶಕ ಹಾಗೂ ಅಭ್ಯಾಸಿ ಟ್ರಸ್ಟ್ ಅಧ್ಯಕ್ಷ ಕಿರಣ್ ಗಿರ್ಗಿ, ಸಿ.ಎಸ್.ಐ ಆಂಗ್ಲ ಮಾಧ್ಯಮ ಶಾಲೆಯ ವಲಯ ಅಧ್ಯಕ್ಷ ರೆವರೆಂಡ್ ಪ್ರಕಾಶ್ ದಾಸರ್ ಮಾತನಾಡಿದರು. ಪ್ರಾಧಿಕಾರ ಸದಸ್ಯ ಎಸ್.ರಾಜು, ಶಿಬಿರದ ಸಂಚಾಲಕಿ ನಂದಿನಿ ರವಿಕುಮಾರ್, ಅಪ್ಪು ಮೆಲೋಡಿಸ್ ಗಾಯಕರಾದ ಯಡಿಯೂರು ನಾಗರಾಜ್, ಮಹಮ್ಮದ್ ಗೌಸ್, ಶಿಕ್ಷಕ ಮಹೇಂದ್ರ, ಶಿಬಿರದ ಮಕ್ಕಳು ಹಾಗೂ ಪಾಲಕರು ಹಾಜರಿದ್ದರು.