ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆಯಲ್ಲಿ ಬಿ.ವಿಜಯಕಾಂತ್ ಅವರನ್ನು ಸನ್ಮಾನಿಸಲಾಯಿತು. ಸಿದ್ದರಾಜು, ವೀರಭದ್ರಪ್ಪ, ಪ್ರಸಾದ್, ಮಹದೇವಸ್ವಾಮಿ, ರಾ.ಬಾಬು, ಭೈರೇಶ್ ಗಾಣಿಗ್, ವೇಣುನಾಯಕ್, ಭೋಲಾರಾಂ ಸೋಲಂಕಿ ಇದ್ದರು. 
ಚಾಮರಾಜನಗರ

ದಾನಿಗಳ ಕೊಡುಗೆಯಿಂದ ಲಕ್ಷಾಂತರ ಬಡ ಜನರಿಗೆ ಚಿಕಿತ್ಸೆ

ಲೋಕೇಶ್ ಮನು. ಡಿ
ಗುಂಡ್ಲುಪೇಟೆ(ಕೊಯಮತ್ತೂರು): ದಾನಿಗಳ ಕೊಡುಗೆಯಿಂದ ಲಕ್ಷಾಂತರ ಬಡ ಜನರಿಗೆ ದೃಷ್ಟಿ ಬರುವಂತಾಗಿದೆ ಎಂದು ಅರವಿಂದ ಕಣ್ಣಾಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ನರೇಂದ್ರನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರಗಳನ್ನು ಆಯೋಜಿಸಿದ್ದ ಪ್ರಾಯೋಜಕರಿಗೆ ಭಾನುವಾರ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪ್ರೇರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂರು ರಾಜ್ಯಗಳಲ್ಲಿ ಆಸ್ಪತ್ರೆಯು ದಾನಿಗಳ ನೆರವಿನಿಂದ ಕಳೆದ ಎರಡು ವರ್ಷದಲ್ಲಿ 836 ಕಣ್ಣಿನ ಉಚಿತ ತಪಾಸಣೆ ಶಿಬಿರ ನಡೆಸಿ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉಚಿತ ಚಿಕಿತ್ಸೆ ನೀಡಿದೆ. ಕೈಗಾರಿಕಾ ವಲಯದಲ್ಲಿ 115 ಶಿಬಿರಗಳನ್ನು ನಡೆಸಿ 3,0300 ಉದ್ಯೋಗಿಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದರಿಂದ ಅವರ ಕೆಲಸದ ಸಾಮರ್ಥ್ಯ ಹೆಚ್ಚಿದೆ. 285 ಶಾಲೆಗಳಲ್ಲಿ ಶಿಬಿರ ನಡೆಸಿ 30 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಇದ್ದ ದೋಷ ಗುರ್ತಿಸಿ 11 ಸಾವಿರ ವಿದ್ಯಾರ್ಥಿಗಳಿಗೆ ಕನ್ನಡಕ ಅಳವಡಿಸಲಾಗಿದೆ. ಮೃತ ವ್ಯಕ್ತಿಯ ಕಣ್ಣುಗಳನ್ನು ಸಂಬಂಧಿಕರು ದಾನ ಮಾಡುವುದರಿಂದ ದೃಷ್ಟಿ ಇಲ್ಲದವರ ಬಾಳಿಗೆ ಬೆಳಕಾಗಬೇಕು. ದಾನಿಗಳು ಮುಂದಿನ ದಿನಗಳಲ್ಲಿ ಸಹ ಉಚಿತ ಶಿಬಿರ ಆಯೋಜಿಸಿ ಇನ್ನು ಹೆಚ್ಚಿನ ಜನರಿಗೆ ದೃಷ್ಟಿ ದಾನ ಮಾಡಬೇಕು ಎಂದರು.
ಪ್ರೇರಣಾ ಸಂವಹನ ಹಾಗೂ ಕ್ಲಿನಿಕಲ್ ಸಲಹೆಗಾರ ಡಾ.ಗಣೇಶ ರಾಮಚಂದ್ರನ್ ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳ ಜತೆ ವೈದ್ಯರು ಸಹಾನುಭೂತಿ ಹಾಗೂ ನಗುಮೊಗದಿಂದ ವರ್ತಿಸಿದರೆ ಅವರ ಅರ್ಧ ಕಾಯಿಲೆಗಳು ಗುಣವಾಗುತ್ತವೆ. ಮನುಷ್ಯ ಆರೋಗ್ಯಪೂರ್ಣ ಬದುಕಿಗೆ ಕ್ರಿಯಾಶೀಲ ಹಾಗೂ ಚುರುಕುತನದ ಮೆದುಳು ಬಹಳ ಮುಖ್ಯವಾಗಿದ್ದು, ನಾವು ಹೇಗೆ ಬದುಕುತ್ತಿದ್ದೇವೆ ಎನ್ನುವುದನ್ನ ನಮ್ಮ ದೇಹದ ಭಾಷೆ ನಿರ್ಧರಿಸುತ್ತದೆ. ಹಾಗಾಗಿ ಬದುಕಿನ ಉದ್ದಕ್ಕೂ ಸಮಾಜ ಸೇವಾ ಕಾರ್ಯದ ಜತೆಗೆ ಆರೋಗ್ಯಕರ ಬದುಕು ಮಹತ್ವದ್ದಾಗಿದೆ. ಉಚಿತ ಶಿಬಿರಗಳನ್ನು ಆಯೋಜಿಸುವ ಮೂಲಕ ದಾನಿಗಳು ಸಮಾಜದ ಸ್ವಾಸ್ಥ್ಯಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ ಎಂದರು.
ಒತ್ತಡಮುಕ್ತ ಜೀವನಶೈಲಿಯು ಸಂತೋಷಕರ ಕುಟುಂಬದ ಸಂಕೇತವಾಗಿದೆ. ಸದಾ ನಗುತ್ತಾ ತುಳಿತಕ್ಕೆ ಒಳಗಾದವರ ಹಾಗೂ ಬಡಜನರ ಆರೋಗ್ಯ ಪೂರ್ಣ ಜೀವನಕ್ಕಾಗಿ ಸಮಾಜ ಸೇವಾ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ವಿಜಯಕಾಂತ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚಾ.ನಗರ ರೋಟರಿ ಸಂಸ್ಥೆ ಅಧ್ಯಕ್ಷ ಚಂದ್ರು, ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಗುಂಡ್ಲುಪೇಟೆಯ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ಮಹದೇವಸ್ವಾಮಿ, ಉಪಾಧ್ಯಕ್ಷ ಎಂ.ವೀರಭದ್ರಪ್ಪ, ಪ್ರದಾನ ಕಾರ್ಯದರ್ಶಿ ಭೈರೇಶ್ ಗಾಣಿಗ್, ಖಜಾಂಚಿ ಎಂ.ಮಲ್ಲು, ನಿರ್ದೇಶಕರಾದ ಪ್ರಸಾದ್, ವೇಣು =ನಾಯಕ್, ಜಿಲ್ಲಾ ಸಂಚಾಲಕ ರಾ.ಬಾಬು, ಗ್ರಾಮಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿದ್ದರಾಜು, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯರಾದ ಕೆರೆಹಳ್ಳಿ ನವೀನ್, ಪಿ.ಚನ್ನಪ್ಪ, ಸೇರಿದಂತೆ ಮೈಸೂರು, ಕೇರಳ ಹಾಗೂ ತಮಿಳುನಾಡಿನ ನಾನಾ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.