ಹನೂರಿನಿಂದ ಚಿಕ್ಕಲ್ಲೂರು ಜಾತ್ರೆಗೆ ಸಂಚರಿಸುವ ವಿಶೇಷ ಬಸ್ ಸೇವೆಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಚಯ್ಯ ಚಾಲನೆ ನೀಡಿದರು. ಉದ್ದನೂರು ಸಿದ್ದರಾಜು, ಸಿದ್ದಪ್ಪಾಜಿ, ಮುಷೀರ್ ಆಹಮದ್, ಮಹದೇವಮ್ಮ ಇತರರು ಇದ್ದರು.  
ಚಾಮರಾಜನಗರ

ವಿಶೇಷ ಬಸ್ ಸೇವೆಗೆ ಚಾಲನೆ

ಲೋಕೇಶ್ ಮನು. ಡಿ
ಹನೂರು: ಚಿಕ್ಕಲ್ಲೂರಿನಲ್ಲಿ 5 ದಿನಗಳ ಕಾಲ ನಡೆಯುವ ಜಾತ್ರೆಗೆ ಭಕ್ತರು ತೆರಳಲು ಅನುಕೂಲ ಕಲ್ಪಿಸುವ ಸಲುವಾಗಿ ವಿಶೇಷ ಬಸ್ ಸಂಚಾರ ಸೇವೆಗೆ ಭಾನುವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಪದಾಧಿಕಾರಿಗಳು ಹನೂರಿನಲ್ಲಿ ಚಾಲನೆ ನೀಡಿದರು.
ಸಮಿತಿಯ ತಾಲೂಕು ಅಧ್ಯಕ್ಷ ರಾಚಯ್ಯ ಮಾತನಾಡಿ, ಚಿಕ್ಕಲ್ಲೂರು ಜಾತ್ರೆಗೆ ಪ್ರತಿ ವರ್ಷವೂ ಚಾಮರಾಜನಗರ ಸೇರಿದಂತೆ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ದೆಸೆಯಲ್ಲಿ ಕೊಳ್ಳೇಗಾಲದಿಂದ ವಿಶೇಷ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆದರೆ ತಾಲೂಕು ಕೇಂದ್ರವಾದ ಹನೂರಿನಿಂದ ಚಿಕ್ಕಲ್ಲೂರಿಗೆ ಬಸ್ ಸೌಕರ್ಯ ಕಲ್ಪಿಸುತ್ತಿರಲಿಲ್ಲ. ಈ ಜಾತ್ರೆಗೆ ಈ ಭಾಗದಿಂದ ಹನೂರು ಸೇರಿದಂತೆ ಒಡೆಯರಪಾಳ್ಯ, ಮಾರ್ಟಳ್ಳಿ, ಲೊಕ್ಕನಹಳ್ಳಿ, ಪೊನ್ನಾಚಿ, ಕೌದಳ್ಳಿ, ರಾಮಾಪುರ, ಕುರಟ್ಟಿಹೊಸೂರು, ಭದ್ರಯ್ಯನಹಳ್ಳಿ, ಶೆಟ್ಟಳ್ಳಿ, ದಂಟಳ್ಳಿ ಹಾಗೂ ಇನ್ನಿತರ ಗ್ರಾಮಗಳಿಂದ ಹೆಚ್ಚಿನ ಭಕ್ತರು ತೆರಳುತ್ತಾರೆ. ಅದರಲ್ಲೂ ಪಂಕ್ತಿಸೇವೆಯ ದಿನ ಸಾವಿರಾರು ಭಕ್ತರು ಭಾಗಿಯಾಗುತ್ತಾರೆ. ಆದರೆ ಈವರೆಗೂ ಹನೂರಿನಿಂದ ಬಸ್ ಸೌಕರ್ಯ ಕಲ್ಪಿಸದ ಪರಿಣಾಮ ಬಹುತೇಕ ಭಕ್ತರು ದೊಡ್ಡಿಂದುವಾಡಿ ಮಾರ್ಗವಾಗಿ ಸುತ್ತಿ ಬಳಸಿ ಚಿಕ್ಕಲ್ಲೂರಿಗೆ ತೆರಳಿದರೆ, ಇನ್ನು ಕೆಲ ಭಕ್ತರು ಬಂಡಳ್ಳಿ ಮಾರ್ಗವಾಗಿ ಆಟೋ ಹಾಗೂ ಗೂಡ್ಸ್ ವಾಹನಗಳ ಮೂಲಕ ತೆರಳಬೇಕಿದ್ದು, ಪ್ರತಿ ವರ್ಷವೂ ಈ ಭಾಗದ ಜನರು ತೊಂದರೆ ಪಡುವಂತಾಗಿತ್ತು. ಬಸ್ ಸೌಕರ್ಯ ಒದಗಿಸುವಂತೆ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳಲ್ಲಿ ಸಾರ್ವಜನಿಕರು ಪ್ರತಿ ವರ್ಷ ಮನವಿ ಮಾಡುತ್ತಾ ಬಂದಿದ್ದರೂ
ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಭಕ್ತರಿಂದ ಅಸಮಾಧಾನ ವ್ಯಕ್ತವಾಗಿತ್ತು. ಇದನ್ನು ಮನಗಂಡು ಸಮಿತಿಯು ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಇದೀಗ ಹನೂರಿನಿಂದ 5 ಬಸ್‌ಗಳು ಚಿಕ್ಕಲ್ಲೂರು ಜಾತ್ರೆಗೆ ಸಂಚರಿಸಲಿವೆ. ಜನತೆ ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಉದ್ದನೂರು ಸಿದ್ದರಾಜು, ತಾಲೂಕು ಸಮಿತಿ ಸದಸ್ಯರಾದ ಸಿದ್ದಪ್ಪಾಜಿ, ಮುಷೀರ್ ಆಹಮ್ಮದ್, ಗೋವಿಂದ, ನಾಗೇಶ್, ಮಹದೇವಮ್ಮ, ಸಾರಿಗೆ ಇಲಾಖೆಯ ಮೇಲ್ವಿಚಾರಕ ಪ್ರವೀಣ್ ಹಾಗೂ ಅಂಕಿ ಅಂಶ ಸಹಾಯಕ ಖಾದರ್ ಇದ್ದರು.