ಭದ್ರಯ್ಯನಹಳ್ಳಿ ಗ್ರಾಮದಲ್ಲಿ ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ದೇಸಿ ಆಕಳುಗಳ ಸಂರಕ್ಷಣೆ ಮಹಾ ಸಂಕಲ್ಪದ ಅಂಗವಾಗಿ ಗೋಫಲ ಟ್ರಸ್ಟ್ ವತಿಯಿಂದ ಗೋವುಗಳನ್ನು ದಾನ ನೀಡಲಾಯಿತು. ಕುಮಾರ, ನಾಗರಾಜು, ಮುತ್ತಯ್ಯ ಇತರರು ಇದ್ದರು.
ತಾಲೂಕಿನ ಭದ್ರಯ್ಯನಹಳ್ಳಿಯಲ್ಲ್ಲಿ ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ದೇಸಿ ಆಕಳುಗಳ ಸಂರಕ್ಷಣೆ ಮಹಾ ಸಂಕಲ್ಪದ ಅಂಗವಾಗಿ ಭಾನುವಾರ ಗೋಫಲ ಟ್ರಸ್ಟ್ ವತಿಯಿಂದ ಗೋಪಾಲಕರಿಗೆ ಗೋ ದಾನ ಮಾಡಲಾಯಿತು.
ಈ ವೇಳೆ ಗೋಫಲ ಟ್ರಸ್ಟ್ ಘಟಕ ವ್ಯವಸ್ಥಾಪಕ ಪಿ.ಕೆ.ಕುಮಾರ ಮಾತನಾಡಿ, ಹನೂರು ಭಾಗದಲ್ಲಿ ಈ ಹಿಂದೆ ಬರಗಾಲ ತಲೆದೋರಿದ್ದ ವೇಳೆ ಗೋವುಗಳು ಮೇವಿನ ಸಮಸ್ಯೆ ಎದುರಿಸುತ್ತಿದ್ದವು. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಗೋ ಸಂರಕ್ಷಣೆಯನ್ನು ಮನಗಂಡು ಶ್ರೀಗಳು ಅಗತ್ಯ ಮೇವನ್ನು ಪೂರೈಸುವುದರ ಮೂಲಕ ಗೋಪಾಲಕರ ಕಷ್ಟಕ್ಕೆ ನೆರವಾಗಿದ್ದರು. ಅಭಯಾಶ್ರಯ ಯೋಜನೆಗಳ ಮೂಲಕ ನವಚೇತನ ತುಂಬಿದ್ದರು. ಶ್ರೀಗಳ ಆಶೀರ್ವಾದದೊಂದಿಗೆ ಶ್ರೀ ಮಠದ ಅಂಗಸಂಸ್ಥೆ ಗೋಫಲ ಟ್ರಸ್ಟ್ ವತಿಯಿಂದ ಮೊದಲ ಹಂತದಲ್ಲಿ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಕಳೆದ ತಿಂಗಳು ಗೋ ಪಾಲಕರಿಗೆ 10 ಮಲೆನಾಡು ಗಿಡ್ಡದ ತಳಿಯ ಹಸುಗಳನ್ನು ದಾನ ಮಾಡಲಾಗಿತ್ತು. ಇದೀಗ 2ನೇ ಹಂತದಲ್ಲಿ ಶ್ರೀಮಠದ ಮಹಾನಂದಿ ಗೋಲೋಕ ಹೊಸ ನಗರ ಸಹಕಾರದೊಂದಿಗೆ ಭದ್ರಯ್ಯನಹಳ್ಳಿಯ 7 ರೈತರಿಗೆ 14 ಹಸುಗಳನ್ನು ವಿತರಿಸಲಾಗಿದೆ. ಆದ್ದರಿಂದ ಗೋವನ್ನು ಆರೈಕೆ ಮಾಡುವುದರ ಮೂಲಕ ದೇಸಿ ಗೋವುಗಳ ಸಂರಕ್ಷಣೆಗೆ ರೈತರು ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಟ್ರಸ್ಟ್‌ನ ರೈತ ಸಂಪರ್ಕಾಧಿಕಾರಿ ಮುತ್ತಯ್ಯ, ಘಟಕ ವ್ಯವಸ್ಥಾಪಕ ಕುಮಾರ್, ಕೌದಳ್ಳಿ ಗೋ ಸೇವಾ ಪ್ರಮುಖ ಶಿವಮೂರ್ತಿ, ಮಣಿಗಾರ್ ಶಿವಕುಮಾರ್, ಭಾರತೀಯ ಕಿಸಾನ್ ಸಂಘದ ಕೊಪ್ಪ ಗ್ರಾಮ ಘಟಕದ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ನಾಗೇಶ್ ಹಾಗೂ ಇತರರು ಇದ್ದರು.