ಗಾಣಿಗಮಂಗಲಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಕಾಡಾನೆಗಳ ಹಿಂಡು ರಸ್ತೆಗೆ ಅಡ್ಡಲಾಗಿ ಕೆಲಕಾಲ ನಿಂತಲ್ಲೇ ನಿಂತಿದ್ದವು.
ಹನೂರು: ತಾಲೂಕಿನ ಗಾಣಿಗಮಂಗಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಶನಿವಾರ ಸಂಜೆ ಕಾಡಾನೆಗಳ ಹಿಂಡು ರಸ್ತೆಯಲ್ಲೇ ಕೆಲಕಾಲ ಅಡ್ಡಲಾಗಿ ನಿಂತ ಪರಿಣಾಮ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿತು.
ಈ ಮಾರ್ಗವು ಗಾಣಿಗಮಂಗಲಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದ್ದು, ಕಾವೇರಿ ವನ್ಯಜೀವಿ ಧಾಮದ ಮೂಲಕ ಹಾದುಹೋಗಿದೆ. ಈ ಗ್ರಾಮವು ಕಾಡಂಚಿಗೆ ಹೊಂದಿಕೊಂಡಿದೆ. ಹೆಚ್ಚು ಸ್ಥಳೀಯರೇ ಈ ರಸ್ತೆಯಲ್ಲೇ ಸಂಚರಿಸುತ್ತಾರೆ. ಈ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳಿದ್ದು, ಒಂಟಿಕಾಡಾನೆ ಆಗಾಗ್ಗೆ ರಸ್ತೆಬದಿ ಕಾಣಿಸಿಕೊಳ್ಳುತ್ತಿತ್ತು. ಕಾಡಾನೆಗಳ ಹಿಂಡು ಒಟ್ಟಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಸಂಜೆ ಮೂರು ಮರಿ ಆನೆಗಳು ಸೇರಿದಂತೆ 8ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಅರಣ್ಯ ಪ್ರದೇಶದಿಂದ ಒಂದಾದರ ಮೇಲೋಂದರಂತೆ ರಸ್ತೆ ಮಧ್ಯಕ್ಕೆ ಬಂದು ಕೆಲಕಾಲ ಅಡ್ಡಲಾಗಿ ನಿಂತಿದ್ದವು. ಇದರಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿತು. ಕಾಡಾಣೆಗಳ ಹಿಂಡು ಅರಣ್ಯ ಪ್ರದೇಶದೊಳಗೆ ತೆರಳುವುದನ್ನೇ ಕಾದು ನಿಂತಿದ್ದರು. ಆದರೆ ಕಾಡಾನೆಗಳು ಆಚೀಚೆ ದೃಷ್ಟಿಯನ್ನು ಹಾಯಿಸುತ್ತಾ ನಿಂತಲ್ಲೇ ನಿಂತಿದ್ದವು. ಈ ವೇಳೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಸ್ಥಳೀಯರು ಶಬ್ದ ಮಾಡಿದ ಕೆಲ ಹೊತ್ತಿನ ಬಳಿಕ ಕಾಡಿನತ್ತ ತೆರಳಿದವು. ಈ ದೃಶ್ಯವನ್ನು ಸಾರ್ವಜನಿಕರೊಬ್ಬರೂ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ಮಾರ್ಗದಲ್ಲಿನ ರಸ್ತೆಯು ತೀವ್ರ ಹದಗೆಟ್ಟಿದ್ದು, ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಬಸ್‌ಗಳ ಸಂಚಾರ ತೀರಾ ಕಡಿಮೆ. ಹಾಗಾಗಿ ಈ ಭಾಗದಲ್ಲಿ ಜನರು ಹೆಚ್ಚಾಗಿ ಬೈಕ್‌ನಲ್ಲಿ ಸಂಚರಿಸಬೇಕಿದೆ. ಈ ಹಿಂದೆ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ರಸ್ತೆ ಮಧ್ಯೆದಲ್ಲಿಯೇ ಕೆಲಕಾಲ ನಿಂತಿದ್ದು, ಆತಂಕ ಉಂಟು ಮಾಡಿದೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಪ್ರಾಣಹಾನಿ ಸಂಭವಿಸುವ ಮುನ್ನ ಎಚ್ಚೆತ್ತು ಈ ಮಾರ್ಗದಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸುವುದರ ಮೂಲಕ ಕಾಡಾನೆಗಳು ರಸ್ತೆಗೆ ಬಾರದಂತೆ ಕಾಯ್ದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.