ಲೊಕ್ಕನಹಳ್ಳಿಯಲ್ಲಿ ನಿಗದಿತ ವೇಳೆ ಬಸ್ ಬಿಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.  
ಚಾಮರಾಜನಗರ

ಸಮರ್ಪಕ ಬಸ್ ಸಂಚಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಲೋಕೇಶ್ ಮನು. ಡಿ
ಹನೂರು: ಬೆಳಗಿನ ಸಮಯದಲ್ಲಿ ನಿಗದಿತ ವೇಳೆಗೆ ಬಸ್ ಬಿಡುವಂತೆ ಆಗ್ರಹಿಸಿ ಶುಕ್ರವಾರ ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಈ ವೇಳೆ ವಿದ್ಯಾರ್ಥಿಗಳು ಮಾತನಾಡಿ, ಈ ಭಾಗದಿಂದ ಕೊಳ್ಳೇಗಾಲದ ಶಾಲಾ, ಕಾಲೇಜಿಗೆ ನೂರಾರು ವಿದ್ಯಾರ್ಥಿಗಳು ತೆರಳುತ್ತಾರೆ. ಜತೆಗೆ ಕೆಲಸ ಕಾರ್ಯಗಳ ನಿಮಿತ್ತ ಸಾರ್ವಜನಿಕರು ತೆರಳುತ್ತಾರೆ. ಆದರೆ ಬೆಳಗಿನ ಸಮಯದಲ್ಲಿ ನಿಗದಿತ ವೇಳೆಗೆ ಬಸ್‌ಗಳು ಬರುತ್ತಿಲ್ಲ. ಇದರಿಂದ ಬಸ್ ನಿಲ್ದಾಣದಲ್ಲಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ-ಕಾಲೇಜಿಗೆ ನಿಗದಿತ ಸಮಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಪಾಠದಿಂದ ವಂಚಿತರಾಗುತ್ತಿದ್ದೇವೆ. ನಿಗದಿತ ವೇಳೆಗೆ ಬಸ್ ಬಾರದಿರುವುದರ ಬಗ್ಗೆ ಚಾಲಕ ಹಾಗೂ ನಿರ್ವಾಹಕರನ್ನು ವಿಚಾರಿಸಿದರೆ ಉಡಾಫೆಯಿಂದ ಉತ್ತರಿಸುತ್ತಾರೆ. ತಿಂಗಳಿನಿಂದಲೂ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆಯನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ಬಸ್ ಬಿಡುವುದಿಲ್ಲ ಎಂದು ಪಟ್ಟುಹಿಡಿದರು.
ಸುದ್ದಿ ತಿಳಿದು ಸಬ್‌ಇನ್‌ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಬಳಿಕ ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಾಗ ಶನಿವಾರದಿಂದ ನಿಗದಿತ ವೇಳೆ ಬಸ್ ಬಿಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.