ಗಂಗನದೊಡ್ಡಿ ಗ್ರಾಮಕ್ಕೆ ಗುರುವಾರ ರಾತ್ರಿ ಎಲ್‌ಟಿಎಫ್ ತಂಡ ಆಗಮಿಸಿ ಡ್ರೋನ್ ಮೂಲಕ ಚಿರತೆ ಜಾಡನ್ನು ಪತ್ತೆಹಚ್ಚಿತು.  
ಚಾಮರಾಜನಗರ

ಡ್ರೋನ್‌ನಿಂದ ಚಿರತೆ ಜಾಡು ಪತ್ತೆ

ಲೋಕೇಶ್ ಮನು. ಡಿ
ಹನೂರು: ತಾಲೂಕಿನ ಗಂಗನದೊಡ್ಡಿ ಗ್ರಾಮಕ್ಕೆ ಗುರುವಾರ ರಾತ್ರಿ ಮೈಸೂರು ಎಲ್‌ಟಿಎಫ್ ತಂಡ ಡ್ರೋನ್ ಮೂಲಕ ಚಿರತೆ ಜಾಡನ್ನು ಪತ್ತೆ ಹಚ್ಚಿದ್ದು, ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಂಡಿದೆ.
ಗಂಗನದೊಡ್ಡಿ ಭಾಗದಲ್ಲಿ ಕಳೆದ 2 ವರ್ಷದಿಂದ ಚಿರತೆಯೊಂದರ ಹಾವಳಿ ಹೆಚ್ಚಾಗಿದ್ದು, ಜಮೀನಿನ ಕೊಟ್ಟಿಗೆಗಳಿಗೆ ಲಗ್ಗೆ ಇಟ್ಟು ಮೇಕೆಗಳನ್ನು ಬಲಿ ಪಡೆಯುತ್ತಿತ್ತು. ಸಾಕು ನಾಯಿಗಳನ್ನು ಎತ್ತೊಯ್ಯುತ್ತಿತ್ತು. ಘಟನೆ ನಡೆದ ವೇಳೆ ರೈತರು ಚಿರತೆಯನ್ನು ಸೆರೆ ಹಿಡಿಯುವಂತೆ ಆಗಾಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಸರಿಯಾದ ಕ್ರಮವಾಗಿರಲಿಲ್ಲ. ಇದರಿಂದ ಈ ಭಾಗದ ರೈತರು ರೋಸಿ ಹೋಗಿದ್ದರು. ಗುರುವಾರ ಗ್ರಾಮಕ್ಕೆ ಮಲೆಮಹದೇಶ್ವರ ವನ್ಯಜೀವಿ ಧಾಮದ ಡಿಸಿಎಫ್ ಭಾಸ್ಕರ್ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಆಗಮಿಸಿ ರೈತರಿಂದ ಸಮಸ್ಯೆ ಆಲಿಸಿ ಚಿರತೆ ಸೆರೆಗೆ ಕೂಡಲೇ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಅದರಂತೆಯೇ ಗುರುವಾರ ರಾತ್ರಿ 10ರ ವೇಳೆಗೆ ಗ್ರಾಮಕ್ಕೆ ಆಗಮಿಸಿದ ಎಲ್‌ಟಿಎಫ್ ತಂಡ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈತರ ಸಹಕಾರ ಪಡೆದು ಡ್ರೋನ್ ಮೂಲಕ ಚಿರತೆ ಜಾಡನ್ನು ಪತ್ತೆ ಹಚ್ಚಿದ್ದಾರೆ. ಶನಿವಾರ ಬೋನ್ ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.