ಮಲೆಮಹದೇಶ್ವರ ಬೆಟ್ಟದಲ್ಲಿ ಬಸ್‌ಗಾಗಿ ಕಾದು ಕುಳಿತಿದ್ದ ಭಕ್ತರು.
ಹನೂರು:ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಬಸ್‌ಗಳ ಕೊರತೆಯಿಂದಾಗಿ ಭಕ್ತರು ಗಂಟೆಗಟ್ಟಲೇ ಕಾದು ಕುಳಿತು ತೊಂದರೆ ಅನುಭವಿಸಿದರು.
ಹೊಸ ವರ್ಷದ ಹಿನ್ನೆಲೆಯಲ್ಲಿ ಮ.ಬೆಟ್ಟಕ್ಕೆ ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಚಾ.ನಗರ ಹಾಗೂ ಇನ್ನಿತರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಅದರಲ್ಲೂ ಶಕ್ತಿ ಯೋಜನೆಯ ಪರಿಣಾಮ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಜತೆಗೆ ಕಾಲ್ನಡಿಗೆ ಮೂಲಕವೂ ಆಗಮಿಸಿದ್ದ ಭಕ್ತರ ಸಂಖ್ಯೆ ಹೆಚ್ಚಿತ್ತು. ದೇವರ ದರ್ಶನ, ಉತ್ಸವಾದಿ ಸೇವೆ ಹಾಗೂ ಹರಕೆ ಸೇವೆ ಸಲ್ಲಿಸಿದರು. ಸುಮಾರು ಮಧ್ಯಾಹ್ನದ ಹೊತ್ತಿಗೆ ಹೆಚ್ಚಿನ ಭಕ್ತರು ಊರಿನತ್ತ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಸಾರಿಗೆ ಇಲಾಖೆ ಭಕ್ತರ ಸಂಖ್ಯೆ ಹೆಚ್ಚಿದ್ದರೂ ಹೆಚ್ಚುವರಿ ಬಸ್ ಸೌಕರ್ಯ ಒದಗಿಸಿರಲಿಲ್ಲ. ಇದರಿಂದ ಬಸ್ಸಿನ ಕೊರತೆ ಉಂಟಾಯಿತು. ಈ ವೇಳೆ ಬೆಂಗಳೂರು ಮಾರ್ಗವಾಗಿ ತೆರಳುವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪರಿಣಾಮ ಭಕ್ತರು ಬಸ್ಸಿಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾದು ಕುಳಿತುಕೊಳ್ಳುವಂತಾಯಿತು.
ನಿಲ್ದಾಣಕ್ಕೆ ಬಸ್ ಆಗಮಿಸುತ್ತಿದ್ದಂತೆಯೇ ಭಕ್ತರು ಬಸ್ಸನ್ನೇರಿ ಆಸನ ಹಿಡಿಯಲು ಮುಗಿ ಬಿದ್ದು ನೂಕುನುಗ್ಗಲಿನಲ್ಲೇ ತೆರಳಿದರು. ಕೆಲ ಭಕ್ತರು ನಿಂತುಕೊಂಡೇ ಪ್ರಯಾಣ ಬೆಳೆಸಿದರೆ, ಇನ್ನು ಕೆಲವರು ಖಾಸಗಿ ಬಸ್ ಮೊರೆ ಹೋದರು. ಇದರಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ತೊಂದರೆ ಅನುಭವಿಸಿದರು. ಸಮರ್ಪಕ ಬಸ್ ಸೌಕರ್ಯ ಕಲ್ಪಿಸದ ಬಗ್ಗೆ ಭಕ್ತರಿಂದ ಆಕ್ಷೇಪ ಕೇಳಿ ಬಂತು.