ರಾಮಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಸಾಪ ವತಿಯಿಂದ ನಾಡಗೀತೆ ನೂರರ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಂದ್ವಾಡಿ ಶಿವಣ್ಣ, ಮಲ್ಲೇಶ್, ಮಾಲಿಂಕಟ್ಟೆ, ಶ್ರೀನಿವಾಸನಾಯ್ಡು, ಲಿಂಗಯ್ಯ ಇತರರು ಇದ್ದರು.
ಹನೂರು: ಕನ್ನಡ ನಾಡಿಗೆ ನಾಡಗೀತೆಯನ್ನು ಕೊಡುಗೆಯಾಗಿ ನೀಡಿದ ಕುವೆಂಪು ಅವರು ಜೀವನದುದ್ದಕ್ಕೂ ಪ್ರಕೃತಿ ಪೂಜಿಸಿದ ಶ್ರೇಷ್ಠ ಕವಿ ಎಂದು ಸಾಹಿತಿ ಇಂದ್ವಾಡಿ ಶಿವಣ್ಣ ತಿಳಿಸಿದರು.
ತಾಲೂಕಿನ ರಾಮಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ನಾಡಗೀತೆ ನೂರರ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಲೆನಾಡಿನ ಪರಿಸರದಲ್ಲಿ ಜನಿಸಿದ ಕುವೆಂಪು ಅವರು ಕಥೆ, ಕವನ ಹಾಗೂ ಕಾದಂಬರಿಗಳಲ್ಲಿ ಪ್ರಕೃತಿಯ ಅದಮ್ಯವಾದ ಕ್ರಿಯಾಶೀಲ ಚಟುವಟಿಕೆಯನ್ನು ಬಹಳ ಸೂಕ್ಷ್ಮವಾಗಿ ಪ್ರತಿಬಿಂಬಿಸಿದ್ದಾರೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯು ಇದಕ್ಕೆ ಸಾಕ್ಷಿಯನ್ನು ಒದಗಿಸುತ್ತದೆ. ಆರಂಭದಲ್ಲಿ ಇಂಗ್ಲಿಷ್ ಕಾವ್ಯವನ್ನು ರಚಿಸಿದ ಕುವೆಂಪು ಅವರು ಐರೀಷ್ ಕವಿಯ ಸಲಹೆ ಮೇರೆಗೆ ಮಾತೃಭಾಷಾ ಕನ್ನಡದಲ್ಲಿ ಬರೆಯಲು ಆರಂಭಿಸಿದರು. ಹೀಗೆ ಮುಂದುವರಿಸುತ್ತಾ ಕನ್ನಡ ಸಾಹಿತ್ಯದ ಮೇರು ಪರ್ವತವಾದರು. ಇವರು ಪದವಿ ಶಿಕ್ಷಣ ಪಡೆಯುತ್ತಿರುವಾಗಲೇ ಅವರೇ ಬರೆದ ಪದ್ಯ ಪಠ್ಯ ಪುಸ್ತಕದಲ್ಲಿ ಪದ್ಯವಾಗಿತ್ತು ಎಂಬುದು ಅವರ ಕಾವ್ಯದ ಶ್ರೇಷ್ಠತೆ ಪ್ರತಿಪಾದಿಸುತ್ತದೆ. ನಾಡಗೀತೆಯನ್ನು ಅವರು 20ರ ಹರೆಯದಲ್ಲಿ ರಚಿಸಿದ ಗೀತೆಯಾಗಿದೆ. ಜೀವನದುದ್ದಕ್ಕೂ ಪ್ರತಿಪಾದಿಸಿದ ಸಿದ್ಧಾಂತದಂತೆ ಬದುಕಿದವರು. ಹಾಗೆಯೇ ದೀನ ದಲಿತರ ಬಗ್ಗೆ ಧ್ವನಿಯೆತ್ತಿದ ಕವಿಗಳಲ್ಲಿ ಕುವೆಂಪು ಅವರು ಮೊದಲಿಗರೆನಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಮುಕ್ತ ಛಂದಸ್ಸಿನಿಂದ ಬರೆಯುವುದರ ಮೂಲಕ ಸಾಹಿತ್ಯದ ಹೊಸ ದಾರಿಯನ್ನು ಸೃಷ್ಟಿಸಿದ್ದಾರೆ. ಕನ್ನಡ ಮಾತೆಗೆ ಜಯವಾಗಲಿ ಎಂದು ಜಯಕಾರದ ನಾಡಗೀತೆಯನ್ನು ರಚಿಸಿ ನಾಡಿಗೆ ನೀಡಿದ್ದು, ನೂರು ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಅವರನ್ನು ನೆನೆಯುವುದು ನಿಜಕ್ಕೂ ಅರ್ಥಪೂರ್ಣ ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಮಲ್ಲೇಶ್ ಮಾಲಿಂಕಟ್ಟೆ, ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸನಾಯ್ಡು, ಶಿಕ್ಷಕರಾದ ಲಿಂಗಯ್ಯ, ಮಾದೇಶ್, ನಾಗರಾಜು, ಗುರುಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕ ಕುಮಾರ್‌ನಾಯಕ್ ಇತರರು ಇದ್ದರು.