ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಗುರುವಾರ ಹೊಸ ವರ್ಷ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ದೇವರ ದರ್ಶನ ಪಡೆದರು.
ಯಳಂದೂರು: ತಾಲೂಕಿನ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟಕ್ಕೆ ಹೊಸ ವರ್ಷ ಪ್ರಯುಕ್ತ ಗುರುವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.
ಬಿಳಿಗಿರಿರಂಗನಬೆಟ್ಟದಲ್ಲಿ ನೂತನ ವರ್ಷ ಸ್ವಾಗತಿಸಲು ಗುರುವಾರ ಬೆಳಗ್ಗೆಯಿಂದ ಬಹುತೇಕ ಪ್ರವಾಸಿಗರು ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ಇತರೆಡೆಯಿಂದ ಬೆಟ್ಟಕ್ಕೆ ಸಾವಿರಾರು ಜನರು ಆಗಮಿಸಿದ್ದರು. ಇದರಿಂದ ಬೆಟ್ಟದ ರಥದ ಬೀದಿ ಹಾಗೂ ದೇವಸ್ಥಾನದ ಪಾದದ ಸಮೀಪ ವಾಹನಗಳು ಹೆಚ್ಚಾಗಿ ಕಂಡು ಬಂದವು. ದೇವಸ್ಥಾನದಲ್ಲಿಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಜನರು ನಂತರ ದೇವಸ್ಥಾನದ ಹಿಂಭಾಗವಿರುವ ಕಮರಿಯಲ್ಲಿ ಪ್ರಕೃತಿ ಸೌಂದರ್ಯ ಸವಿದರು. ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಂತರ ಕೆ. ಗುಡಿಗೂ ಪ್ರವಾಸಿಗರು ತೆರಳಿ ಪ್ರಕೃತಿ ಸೌಂದರ್ಯ ವೀಕ್ಷಿಸಿದರು.
ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ: ಬೆಲ್ಲವತ್ತ ಗ್ರಾಮದಲ್ಲಿರುವ ಬಿಲ್ಲಯ್ಯ, ಕಾರಯ್ಯ ಸಮೇತ ಮಲೆಮಹದೇಶ್ವರ ದೇಗುಲವೂ ಸೇರಿದಂತೆ ಪಟ್ಟಣದ ಗೌರೇಶ್ವರ ದೇವಸ್ಥಾನ, ಭೂ ಲಕ್ಷ್ಮೀವರಹಸ್ವಾಮಿ ದೇವಸ್ಥಾನ, ಗೋಡೆ ಗಣಪತಿ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ, ಸುವರ್ಣ ತಿರುಮಲ ಹಾಗೂ ತಾಲೂಕಿನ ಕಂದಹಳ್ಳಿ ಮಹದೇಶ್ವರ ದೇವಸ್ಥಾನ, ಮದ್ದೂರಿನ ಎಳೆ ಪಿಳ್ಳಾರಿ ದೇವಸ್ಥಾನ ಸೇರಿದಂತೆ ಇತರ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು.