ಪಟ್ಟಣದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯ ಗೇಟಿಗೆ ಬೀಗ ಜಡಿದಿರುವುದು. 
ಚಾಮರಾಜನಗರ

ಚೌಡೇಶ್ವರಿ ದೇವಸ್ಥಾನಕ್ಕೆ ಬೀಗ

ಲೋಕೇಶ್ ಮನು. ಡಿ
ಕೊಳ್ಳೆಗಾಲ: ವೈಕುಂಠ ಏಕಾದಶಿ ದಿನದಂದೇ ಪಟ್ಟಣದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯ ಗೇಟಿಗೆ ದೇವಾಂಗ ಸಮಾಜದ ಎರಡು ಗುಂಪಿನ ಮುಖಂಡರು ಬೀಗ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಭಕ್ತರು ಪರದಾಡಿದರು. 
ದೇವಾಲಯ ಗೇಟಿಗೆ ಎರಡು ಗುಂಪಿನವರು ಬೀಗ ಹಾಕಿಕೊಂಡು ಹಬ್ಬ ಆಚರಣೆಗೆ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಹಾಗೂ ತಂಡ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಗೇಟಿಗೆ 4 ಬೀಗ ಹಾಕಿರುವುದನ್ನು ಗಮನಿಸಿ ಬೀಗ ಹಾಕಿರುವವರು ಬೀಗ ತೆಗೆಯಬೇಕು. ಹಬ್ಬದಂದು ಸಾರ್ವಜನಿಕರ ಧಾರ್ಮಿಕ ಪೂಜಾ ಕೈಂಕರ್ಯಕ್ಕೆ ತೊಂದರೆಯಾದರೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸ್ಥಳದಲ್ಲಿದ್ದ ದೇವಾಂಗ ಸಮಾಜದ ಶೆಟ್ಟಿಗಾರ ಸಿ.ಎಂ ಪರಮೇಶ್ವರ್, ಶಿವಕುಮಾರ್, ಲಕ್ಷ್ಮಣ್ ಇತರರು ಮಾತನಾಡಿ, ವೈಕುಂಠ ಏಕಾದಶಿ ಹಿನ್ನೆಲೆ ದೇವಾಲಯದಲ್ಲಿ ಪೂಜಾ ಸಿದ್ಧತೆ, ಅಲಂಕಾರ ಕಾರ್ಯ ನಡೆಸಲು ಅರ್ಚಕ ನಟರಾಜು, ಯಜಮಾನ ನಾಗರಾಜಯ್ಯ ಅಚ್ಗಾಳ್ ಬಣ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. 
 ನಾಗರಾಜಯ್ಯ ಅಚ್ಗಾಳ್ ಮಾತನಾಡಿ, ಅರ್ಚಕ ನಟರಾಜು ಧನುರ್ಮಾಸ ಪೂಜೆ ಮುಗಿಸಿ ಕೊಂಡು ದೇವಾಲಯಕ್ಕೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಅರ್ಚಕರು ವಿಶ್ರಮಿಸುವುದು ಬೇಡವೇ? ಅಷ್ಟರಲ್ಲಿ ಮತ್ತೆ ಕೆಲವರು ಗೇಟಿಗೆ ಹೇಗೆ ಬೀಗ ಹಾಕಿದ್ದಾರೆ ಅಸಮಾಧಾನ ವ್ಯಕ್ತಪಡಿಸಿದರು.
ಕೊನೆಗೆ ಬಂದ ಅರ್ಚಕ ನಟರಾಜು ತಾವು ಹಾಕಿದ್ದ 2 ಬೀಗವನ್ನು ತೆಗೆದರು. ಸ್ಥಳದಲ್ಲಿದ್ದ ಶಿವಕುಮಾರ್ ಸಹ ತಾವು ಹಾಕಿದ್ದ 2 ಬೀಗವನ್ನು ತೆಗೆದರು.
 ಸಾರ್ವಜನಿಕರಿಗೆ ತೊಂದರೆ ಸಲ್ಲದು: ಸ್ಥಳಕ್ಕೆ ಚಾಮರಾಜನಗರ ಡಿವೈಎಸ್ಪಿ ಎನ್.ಸ್ನೇಹ ರಾಜ್ ಭೇಟಿ ನೀಡಿ, ಸಮಾಜದ ಮುಖಂಡರ ಜತೆ ಚರ್ಚಿಸಿದರು. ಈ ವೇಳೆ ಎರಡು ಗುಂಪಿನ ಮುಖಂಡರು ಪರಸ್ಪರ ದೂರಿಕೊಂಡು ಮಾತಿನ ಚಕಮಕಿ ಹೆಚ್ಚಾದಾಗ ಸ್ನೇಹ ರಾಜ್ ಅವರು ನಿಮ್ಮಲ್ಲಿರುವ ವೈಮನಸ್ಸಿನಿಂದ ಸಾರ್ವಜನಿಕರಿಗೆ ತೊಂದರೆ ಆಗುವುದು ಬೇಡ. ಸಾರ್ವಜನಿಕರಿಗೆ ತೊಂದರೆಯಾದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ದೇವಾಲಯದಲ್ಲಿ ಹಬ್ಬದ ಪೂಜೆಗಳು ನಡೆಯಲು ಅವಕಾಶ ಮಾಡಿಕೊಡಿ ಎಂದರು.
ಬಳಿಕ ತಹಸೀಲ್ದಾರ್ ಬಸವರಾಜು ಭೇಟಿ ನೀಡಿ, ದೇವಾಲಯಕ್ಕೆ ಬರುವ ಭಕ್ತರ ಭಾವನೆಗೆ ತೊಂದರೆಯಾದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ದೇವಾಲಯ ನಮ್ಮದು ಅದಕ್ಕೆ ನಾವು ಬೀಗ ಹಾಕುತ್ತೇವೆ ಎಂಬುವರು ದಾಖಲೆ ತೋರಿಸಿ ಬೀಗ ಹಾಕಿಕೊಳ್ಳಲಿ. ಎರಡು ಗುಂಪಿನವರಿಗೆ ತೊಂದರೆ ಇದ್ದರೆ ಕಚೇರಿಗೆ ಬಂದು ಹೇಳಿಕೊಳ್ಳಿ. ಜನರ ಭಾವನೆಗೆ ಧಕ್ಕೆ ತರಬಾರದು. ದೇವಸ್ಥಾನ ಸರ್ಕಾರಕ್ಕೆ ಸೇರಿದ್ದು, ಈಗಾಗಲೇ ನೋಟಿಸ್ ಕೂಡ ನೀಡಿದ್ದೇವೆ ಎಂದು ಅವರು, ಸ್ಥಳದಲ್ಲಿದ್ದ ಆರ್‌ಐ ನಿರಂಜನ್ ಅವರಿಗೆ ದೇವಾಲಯ ಪೂಜೆಗಳು ಮುಗಿದ ಬಳಿಕ ಬೀಗ ಪಡೆದುಕೊಳ್ಳಿ. ನಂತರ ಪೂಜಾ ಕೈಂಕರ್ಯ ನಡೆಯಬೇಕಾದರೆ ತೆಗೆದು ಅನುವು ಮಾಡಿಕೊಡಿ ಅವರಿಗೆ ವಹಿಸಿದರು.
ಘಟನೆ ಸಂಬಂಧ ಎರಡು ಗುಂಪಿನವರ ಹೇಳಿಕೆ ಪಡೆದು ವರದಿ ನೀಡುವಂತೆ ಪಿಎಸ್‌ಐ ವರ್ಷಾ ಅವರಿಗೆ ಸೂಚನೆ ನೀಡಿದರು. ಬಳಿಕ ಸಾರ್ವಜನಿಕರಿಗೆ ದೇವರ ದರ್ಶನ, ಪೂಜಾ ವಿಧಿ-ವಿಧಾನಕ್ಕೆ ಅವಕಾಶ ಮಾಡಿಕೊಡಲಾಯಿತು.