ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯ ಲಕ್ಷ್ಮಿವರದರಾಜಸ್ವಾಮಿ ದೇವಾಲಯದಲ್ಲಿ ನಿರ್ಮಿಸಿದ್ದ ಉತ್ಸವ ಮೂರ್ತಿಗಳು ಹಾಗೂ ಮೈಸೂರು ಅರಸರು ಕೊಡುಗೆಯಾಗಿ ನೀಡಿದ್ದ ಲಕ್ಷ್ಮೀ ವಿಗ್ರಹಗಳ ಕೆಳಗೆ ಸ್ವರ್ಗದ ಬಾಗಿಲಿನ ಮೂಲಕ ಭಕ್ತರು ಸಾಗಿದರು.
ಗುಂಡ್ಲುಪೇಟೆ: ವೈಕುಂಠ ಏಕಾದಶಿಯ ಅಂಗವಾಗಿ ತಾಲೂಕಿನ ವಿವಿಧ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಸ್ವರ್ಗದ ಬಾಗಿಲಿನ ಮೂಲಕ ಸಾಗಿ ಪುನೀತರಾದರು.
ಈ ಅಂಗವಾಗಿ ಮಂಗಳವಾರ ತಾಲೂಕಿನ ಹಿಮವದ್ ಗೋಪಾಲಸ್ವಾಮಿಬೆಟ್ಟ, ಪಟ್ಟಣದ ಶ್ರೀ ವಿಜಯನಾರಾಯಣಸ್ವಾಮಿ ದೇವಾಲಯ, ಹುಲಿಗಿನಮೊರಡಿ ವೆಂಕಟರಮಣಸ್ವಾಮಿ ದೇವಾಲಯ, ತೆರಕಣಾಂಬಿಯ ಲಕ್ಷ್ಮೀವರದರಾಜಸ್ವಾಮಿ ದೇವಾಲಯ, ಪರಶುರಾಮ ದೇವಾಲಯ ಮುಂತಾದ ದೇವಸ್ಥಾನಗಳಲ್ಲಿ ನಸುಕಿನಿಂದಲೇ ವಿಶೇಷ ಅಲಂಕಾರ ಹಾಗೂ ಪೂಜೆಗಳನ್ನು ನೆರವೇರಿಸಲಾಯಿತು.
ನಸುಕಿನಲ್ಲಿ ಧನುರ್ಮಾಸಾಚರಣೆ ನಂತರ ಸಾವಿರಾರು ಭಕ್ತರು ವಿಷ್ಣುವಿನ ದೇವಾಲಯಗಳಿಗೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ಪಟ್ಟಣದ ಪುರಾತನ ಶ್ರೀ ರಾಮೇಶ್ವರ ದೇವಾಲಯದಲ್ಲಿನ ಶಿವಲಿಂಗಕ್ಕೆ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ಹರಿ ಮತ್ತು ಹರನ ಅಲಂಕಾರ ಮಾಡಿದ್ದರು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು.
ತಾಲೂಕಿನ ತೆರಕಣಾಂಬಿಯ ಲಕ್ಷ್ಮೀ ವರದರಾಜಸ್ವಾಮಿ ದೇವಾಲಯದಲ್ಲಿ ಪ್ರಧಾನ ಅರ್ಚಕ ವರದರಾಜು ಅವರ ನೇತೃತ್ವದಲ್ಲಿ ಲಕ್ಷ್ಮೀ ಮತ್ತು ಅಮ್ಮನವರಿಗೆ ನಾನಾ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯದಲ್ಲಿ ಉತ್ಸವಮೂರ್ತಿಗಳು ಹಾಗೂ ಮೈಸೂರು ಅರಸರು ಕೊಡುಗೆಯಾಗಿ ನೀಡಿದ್ದ ಲಕ್ಷ್ಮೀ ವಿಗ್ರಹಗಳ ಇರಿಸಿ ಅವುಗಳ ಕೆಳಗೆ ನಿರ್ಮಿಸಿದ್ದ ಸ್ವರ್ಗದ ಬಾಗಿಲಿನ ಮೂಲಕ ಭಕ್ತರು ಸಾಗಿ ಪುನೀತರಾದರು.