ಅಲಗುಮೂಲೆ ಸಮೀಪದ ಮುಂಬೆಟ್ಟದ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದು.
ಹನೂರು : ತಾಲೂಕಿನ ಕಾವೇರಿ ವನ್ಯಜೀವಿ ವಲಯದ ಅಲಗುಮೂಲೆ ಮುಂಬೆಟ್ಟದ ಅರಣ್ಯ ಪ್ರದೇಶದಲ್ಲಿ ಬುಧವಾರ ಸಂಜೆ ಬೆಂಕಿ ಕಾಣಿಸಿಕೊಂಡು ಹಸಿರಿನಿಂದ ಕೂಡಿದ್ದ ಪ್ರದೇಶ ಅಗ್ನಿಗೆ ಆಹುತಿಯಾಗಿದೆ.
ಈ ಅರಣ್ಯ ಪ್ರದೇಶದಲ್ಲಿರುವ ದೇಗುಲಕ್ಕೆ ಕಳೆದ ಹುಣ್ಣಿಮೆಯಂದು ಅಲಗುಮೂಲೆ ಗ್ರಾಮಸ್ಥರು ಕಾಲ್ನಡಿಗೆಯಲ್ಲಿ ತೆರಳಿ ಪೂಜೆ ಸಲ್ಲಿಸಿದ್ದರು. ಬೇಸಿಗೆಯ ವೇಳೆ ಒಣಗಿದ್ದ ಅರಣ್ಯ ಪ್ರದೇಶ ಇದೀಗ ಹಸಿರಿನಿಂದ ಕೂಡಿದೆ. ಸ್ಥಳೀಯ ಜನರು ಇತ್ತ ತೆರಳುತ್ತಿಲ್ಲ. ಆದರೆ ಸಂಜೆ 6 ಗಂಟೆಯಲ್ಲಿ ಅರಣ್ಯ ಪ್ರದೇಶದ ಹಲವೆಡೆ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಸುದ್ದಿ ತಿಳಿದು ಕೊತ್ತನೂರು ಅರಣ್ಯ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕೃತ್ಯ ಕಿಡಿಗೇಡಿಗಳಿಂದಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.