ಗುಂಡ್ಲುಪೇಟೆ ತಾಲೂಕಿನ ಹುಂಡೀಪುರ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ನೂತನ ಸಭಾಭವನವನ್ನು ಗಣೇಶ್ ಪ್ರಸಾದ್ ಉದ್ಘಾಟಿಸಿದರು. ನಂಜಪ್ಪ, ಪುಟ್ಟಮಾದಮ್ಮ, ಜಾಗೀರ್‌ದಾರ್ ಇದ್ದರು.
ಗುಂಡ್ಲುಪೇಟೆ: ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಕಾರ್ಯಕ್ರಮ ಹಾಕಿಕೊಳ್ಳಲಾಗುತ್ತದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ಹುಂಡೀಪುರ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ 16 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸಭಾ ಭವನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಬಹುತೇಕ ಗ್ರಾಮ ಪಂಚಾಯಿತಿಗಳಿಗೆ ಅಭಿವೃದ್ಧಿ ಅಧಿಕಾರಿಗಳ ಕೊರತೆಯಾಗಿದ್ದು, ಒಬ್ಬರೇ ಅಧಿಕಾರಿಯನ್ನು ಎರಡು ಪಂಚಾಯಿತಿಗಳಿಗೆ ನಿಯೋಜಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆಯಿದ್ದು, ಸರ್ಕಾರ ಸದ್ಯದಲ್ಲಿಯೇ ಹುದ್ದೆಗಳನ್ನು ಭರ್ತಿ ಮಾಡಲಿದೆ. ನಂತರ ಈ ಹುದ್ದೆಗಳಿಗೆ ಹಂತಹಂತವಾಗಿ ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಚೌಡಹಳ್ಳಿ ನಂಜಪ್ಪ ಮಾತನಾಡಿ, ಹಿಂದೆ ಶಾಸಕರಾಗಿದ್ದ ಸಿ.ಎಸ್.ನಿರಂಜನಕುಮಾರ್ ಅವಧಿಯಲ್ಲಿ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅನುದಾನ ಪಡೆದು ಅಭಿವೃದ್ಧಿಗೊಳಿಸಲಾಗಿತ್ತು. ರಾಜ್ಯ ಸರ್ಕಾರ ನೀಡಿದ ಅಮೃತ ಗ್ರಾಮಪಂಚಾಯಿತಿ ಪ್ರಶಸ್ತಿಯ ಜತೆಗೆ 25 ಲಕ್ಷ ರೂ. ಅನುದಾನದಲ್ಲಿ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ತಮ್ಮ ಅವಧಿಯಲ್ಲಿಯೂ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಟ್ಟಮಾದಮ್ಮ, ಸದಸ್ಯರಾದ ಎಚ್.ಪಿ.ಮಹೇಂದ್ರ, ಡಿ.ರಾಜು, ಶಿವಬಸಪ್ಪ, ನೀಲಮ್ಮ, ಪಾರ್ವತಿ, ಸಾಕಮ್ಮ, ಆನಂದ, ಪಿಡಿಒ ಕುಮಾರ್ ಜಾಗೀದಾರ್ ಹಾಗೂ ಮುಖಂಡರು ಇದ್ದರು.