ಹನೂರಿನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ಮಂಡಲದಿಂದ ಪ್ರತಿಭಟನೆ ನಡೆಯಿತು. ವೃಷಭೇಂದ್ರಸ್ವಾಮಿ, ಮೂರ್ತಿ, ಜಗನ್ನಾಥನಾಯ್ಡು, ಗುರುಪಾದಸ್ವಾಮಿ, ರಾಚಪ್ಪ ಇತರರು ಇದ್ದರು.
ಹನೂರು: ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶನಿವಾರ ಬಿಜೆಪಿ ಹನೂರು ಮಂಡಲದ ವತಿಯಿಂದ ಪ್ರತಿಭಟನೆ ನಡೆಯಿತು.
ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಮಂಡಲದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹನೂರು ಮಂಡಲಾಧ್ಯಕ್ಷ ಕೆ.ಪಿ ವೃಷಭೇಂದ್ರಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಸಮರ್ಪಕ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದೆ. ಕೃಷಿಯ ಜತೆಗೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದ್ದರಿಂದ ಈ ಸಮಸ್ಯೆ ಬಗೆಹರಿಸಬೇಕು. ಕೆರೆ-ಕಟ್ಟೆಗಳಿಗೆ ನದಿ ಮೂಲದಿಂದ ನೀರು ತುಂಬಿಸಬೇಕು. ತಾಲೂಕಿನ ದಂಟಳ್ಳಿ ಸಮೀಪದಲ್ಲೇ ಹರಿಯುತ್ತಿರುವ ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆಯನ್ನು ರೂಪಿಸಬೇಕು. ಬೇಸಿಗೆಯಲ್ಲಿ ಜಾನುವಾರುಗಳ ಮೇವಿಗೆ ತೊಂದರೆಯಾಗದಂತೆ ಮೇವು ಬ್ಯಾಂಕ್ ತೆರೆಯಬೇಕು. ಹೊರರಾಜ್ಯಗಳಿಗೆ ಸಾಗಣೆಯಾಗುತ್ತಿರುವ ಮೇವಿಗೆ ಕಡಿವಾಣ ಹಾಕಬೇಕು. ಇನ್ನು ಇತ್ತೀಚಿಗೆ ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳು ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿರುವುದು ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು. ಮೆಕ್ಕೆಜೋಳದ ಬೆಲೆ ಕುಸಿದಿರುವ ಕಾರಣ ಬೆಂಬಲ ಬೆಲೆ ನೀಡಬೇಕು. ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಹನೂರಿನ ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕು. ತಾಲೂಕಿನಲ್ಲಿ ಲೊಕ್ಕನಹಳ್ಳಿ, ಬಂಡಳ್ಳಿ ರಸ್ತೆ ಸೇರಿದಂತೆ ಇನ್ನು ಬಹುತೇಕ ಕಡೆಗಳಲ್ಲಿ ಹದಗೆಟ್ಟಿರುವ ರಸ್ತೆಯಿಂದ ಸಾರ್ವಜನಿಕರಿಂದ ಸಂಚರಿಸಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಆಗ್ಗಾಗ್ಗೆ ಅಪಘಾತವಾಗುತ್ತಿದೆ. ಆದ್ದರಿಂದ ರಸ್ತೆಗಳ ಅಭಿವೃದ್ಧಿಯಾಗಬೇಕು. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ಸಿಎಂ ಖುರ್ಚಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಇದರಿಂದ ಕ್ಷೇತ್ರದ ಜನರು ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ. ಆದ್ದರಿಂದ ರಾಜ್ಯಪಾಲರು ಈ ಸಂಬಂಧ ಮಧ್ಯೆ ಪ್ರವೇಶಿಸಿ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಳಿಕ ಮನವಿ ಪತ್ರವನ್ನು ಉಪ ತಹಸೀಲ್ದಾರ್ ನಾಗೇಂದ್ರ ಅವರ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
ಮಂಡಲದ ಮಾಜಿ ಅಧ್ಯಕ್ಷ ಜಗನ್ನಾಥನಾಯ್ಡು, ರೈತ ಮೋರ್ಚಾ ಅಧ್ಯಕ್ಷ ಗುರುಪಾದಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಮೂರ್ತಿ, ವಿಜಯೇಂದ್ರಗೌಡ, ಉಪಾಧ್ಯಕ್ಷರಾದ ರಾಚಪ್ಪ, ಕೃಷ್ಣೇಗೌಡ, ಮಹದೇವಸ್ವಾಮಿ, ಪರಶಿವಮೂರ್ತಿ, ಲೋಕೇಶ್, ಶಕ್ತಿಕೇಂದ್ರದ ಸುಂದ್ರಪ್ಪ, ಮಹೇಶ್, ವೆಂಕಟರಾಜು ಇತರರು ಇದ್ದರು.