ಹನೂರು ತಾಲೂಕಿನ ಪೊನ್ನಾಚಿಯಲ್ಲಿ ಚಿರತೆ ದಾಳಿಗೆ ಮೇಕೆ ಬಲಿಯಾಗಿರುವುದು.
ಹನೂರು: ತಾಲೂಕಿನ ಕಾಡಂಚಿನ ಪೊನ್ನಾಚಿಯ ಬಾಳೆಗುಡ್ಡೆಯಲ್ಲಿ ಶುಕ್ರವಾರ ಚಿರತೆ ದಾಳಿಗೆ ಮೇಕೆಯೊಂದು ಬಲಿಯಾಗಿದ್ದು, ಜನರು ಭಯಭೀತರಾಗಿದ್ದಾರೆ.
ಗ್ರಾಮದ ದೊಡ್ಡಮಾದಣ್ಣ ಎಂಬುವರು ಮೇಕೆಯನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಚಿರತೆ ಮೇಕೆ ಮೇಲೆ ದಾಳಿ ನಡೆಸಿ ಬಲಿ ಪಡೆದಿದೆ. ಈ ವೇಳೆ ದೊಡ್ಡಮಾದಣ್ಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಸುದ್ದಿ ತಿಳಿಸಲಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರು ಮಾತನಾಡಿ, ಪೊನ್ನಾಚಿ, ಅಸ್ತೂರು, ಮರೂರು, ಕಕ್ಕೆಹೊಲ ಸೇರಿದಂತೆ ಈ ಭಾಗದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಚಿರತೆ ಹಾವಳಿ ಹೆಚ್ಚಾಗಿದೆ. ಈ ಹಿಂದೆ ಕಕ್ಕೆಹೊಲದಲ್ಲಿ ಶಂಭು ಎಂಬುವರಿಗೆ ಸೇರಿದ ಮೇಕೆ ಹಾಗೂ ಕೋಳಿಗಳನ್ನು ಎತ್ತೋಯ್ದಿದೆ.
ಅಲ್ಲದೆ ಪೂರ್ಣಿಮಾ ಎಂಬುವರಿಗೆ ಸೇರಿದ 2 ಮೇಕೆಗಳನ್ನು ಬಲಿ ಪಡೆದಿದೆ. ಹಾಗಾಗಿ ಇತ್ತೀಚೆಗೆ ಚಿರತೆ ಹಾವಳಿ ಹೆಚ್ಚಾಗಿದೆ. ಇದರಿಂದ ರಾತ್ರಿ ವೇಳೆ ಒಡಾಡಲು ಭಯ ಪಡುವಂತಾಗಿದೆ. ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಬೋನು ಇರಿಸುವುದರ ಮೂಲಕ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದರು. ಇದಕ್ಕೆ ಸಿಬ್ಬಂದಿ ಪ್ರತಿಕ್ರಿಯಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.