ಕೊಳ್ಳೇಗಾಲದ ರೋಟರಿ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರೊ.ದೊಡ್ಡಲಿಂಗೇಗೌಡ, ಎಸ್.ನಾಗರಾಜು ಕೊಂಗರಹಳ್ಳಿ, ಪಿ.ಮಹದೇವು, ಬಿ.ಕೆ.ಪ್ರಕಾಶ್, ಬಸವರಾಜು ಭಾಗವಹಿಸಿದ್ದರು.
ಕೊಳ್ಳೇಗಾಲ: ಕನ್ನಡಿಗರಾದ ನಾವು ಅನ್ಯಭಾಷಿಕರಿಗೂ ಕನ್ನಡ ಕಲಿಯುವ ವಾತಾವರಣ ನಿರ್ಮಿಸಬೇಕು ಎಂದು ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ದೊಡ್ಡಲಿಂಗೇಗೌಡ ಹೇಳಿದರು.
ಪಟ್ಟಣದ ರೋಟರಿ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಸಹಯೋಗದೊಂದಿಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಬ್ಯಾಂಕ್, ಜೀವ ವಿಮೆ, ಅಂಚೆ ಕಚೇರಿ ಮೊದಲಾದ ಕೇಂದ್ರ ಸರ್ಕಾರದ ಕಚೇರಿಗಳು ಗ್ರಾಹಕರಿಗೆ ಅನುಕೂಲವಾಗುವಂತೆ, ರಾಜ್ಯದ ಭಾಷೆಯಲ್ಲಿ ವ್ಯವಹರಿಸಬೇಕು. ದ್ವಿಭಾಷ ಸೂತ್ರ ರಾಜ್ಯದಲ್ಲಿ ಜಾರಿಯಾಗಬೇಕು. ರಾಜ್ಯೋತ್ಸವ ನಾಡು, ನುಡಿ, ಸಂಸ್ಕೃತಿ ತ್ರಿವೇಣಿ ಸಂಗಮ ಎಂಬುದಾಗಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡ ಕರಗದಂತೆ ಕನ್ನಡ ಉಳಿಸಿ, ಬೆಳೆಸಬೇಕಾದರೆ ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ಕೊಡಬೇಕು ಎಂದು ಸಲಹೆ ನೀಡಿದರು.
ರೋಟರಿ ಅಧ್ಯಕ್ಷ ಪಿ.ಮಹದೇವು, ಕಾರ್ಯದರ್ಶಿ ಬಿ.ಕೆ.ಪ್ರಕಾಶ್, ಸಹಾಯಕ ಪ್ರಾಂತಪಾಲ ಬಸವರಾಜು, ಪುಟ್ಟರಸಶೆಟ್ಟಿ, ಸೋಮಶೇಖರ್ ನರೇಂದ್ರನಾಥ್ ಮತ್ತಿತರರಿದ್ದರು.