ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದ ಆಲ್ಲಳ್ಳಿ ಮಾರಮ್ಮನವರ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಗುಂಡ್ಲುಪೇಟೆ: ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಅಲ್ಲಳ್ಳಿ ಪಾರ್ವತಾಂಭೆ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಪ್ರತಿ ವರ್ಷವೂ ಕಾರ್ತೀಕ ಮಾಸದ ಮೂರನೇ ಸೋಮವಾರ ನಡೆಯುತ್ತಾ ಬಂದಿರುವ ಶ್ರೀ ಅಲ್ಲಹಳ್ಳಿ ಪಾರ್ವತಾಂಭೆ ಜಾತ್ರೆ ಮೂರು ದಿನಗಳವರೆಗೆ ಅದ್ದೂರಿಯಾಗಿ ನಡೆಯುತ್ತಿದ್ದು ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೇವಂತಿಗೆ ಹೂವಿನಿಂದ ಅಲಂಕರಿಸಿದ ದಿವ್ಯ ರಥೋತ್ಸವ ನಡೆಯಿತು.
ಜಾತ್ರೆಯ ಅಂಗವಾಗಿ ಕಳೆದ ವರ್ಷ ಜೀರ್ಣೋದ್ಧಾರ ಮಾಡಿ ಲೋಕಾರ್ಪಣೆಗೊಂಡ ದೇವಾಲಯಕ್ಕೆ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಎಲ್ಲ ಬೀದಿಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿ ಗ್ರಾಮಸ್ಥರು ಬೇರೆ ಊರುಗಳಲ್ಲಿರುವ ತಮ್ಮ ಬಂಧುಗಳನ್ನು ಜಾತ್ರೆಗೆ ಆಹ್ವಾನಿಸಿ ಗ್ರಾಮದೇವತೆಯ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು.
ಸೋಮವಾರ ಗ್ರಾಮಸ್ಥರು ಗ್ರಾಮದಿಂದ ಪಾರ್ವತಾಂಭೆಯ ವಿಗ್ರಹ ಹೊತ್ತು ಬಂಡೀಪುರದ ಮದ್ದೂರು ಅರಣ್ಯದೊಳಗೆ ಇರುವ ಮೂಲಸ್ಥಳ ಕಸಗಲಪುರಕ್ಕೆ ತೆರಳಿ ರಾತ್ರಿ ಪೂಜೆ ಸಲ್ಲಿಸಿ, ಮಂಗಳವಾರ ಗ್ರಾಮಕ್ಕೆ ಹಿಂದಿರುಗಿದರು. ಮಾರ್ಗದಲ್ಲಿ ಬರುವ ಬರಗಿ, ದೇಶಿಪುರ, ಆಲತ್ತೂರು, ಶೆಟ್ಟಹಳ್ಳಿ ಗ್ರಾಮಗಳ ಜನರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.
ಮಂಗಳವಾರ ಗ್ರಾಮದಲ್ಲಿ ಸೇವಂತಿಗೆ ಹೂವಿನಿಂದ ಅಲಂಕರಿಸಿದ ರಥದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜಾತ್ರೆಗೆ ಬಂದಿದ್ದ ಭಕ್ತರು ಸೇವಂತಿಗೆ ಹೂವನ್ನು ರಥಕ್ಕೆ ಸಮರ್ಪಿಸಿದರು. ಹರಕೆ ಹೊತ್ತ ಭಕ್ತರು ಬಾಯಿ ಬೀಗ ಸೇರಿದಂತೆ ನಾನಾ ಹರಕೆಗಳನ್ನು ತೀರಿಸಿದರು. ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿದ ನಂತರ ರಥೋತ್ಸವ ಆರಂಭವಾಯಿತು. ಕಜ್ಜಾಯ, ಬಾಳೆಹಣ್ಣು ಎಸೆಯುವ ಮೂಲಕ ಭಕ್ತರು ಹರಕೆ ತೀರಿಸಿದರು.
ಹರಿದು ಬಂತು ಭಕ್ತಸಾಗರ: ತಾಲೂಕು ಅಲ್ಲದೆ ನೆರೆಯ ನಂಜನಗೂಡು, ಹೆಗ್ಗಡದೇವನಕೋಟೆ, ಚಾಮರಾಜನಗರ ಮುಂತಾದ ತಾಲೂಕುಗಳ ಸಾವಿರಾರು ಭಕ್ತರು ತಮ್ಮ ಎತ್ತಿನ ಗಾಡಿಗಳು ಹಾಗೂ ರಾಸುಗಳೊಂದಿಗೆ ಜಾತ್ರೆಗೆ ಆಗಮಿಸಿದ್ದರಿಂದ ಗ್ರಾಮದಲ್ಲಿ ಎಲ್ಲಿಯೂ ಕಾಲಿಡಲು ಸಾಧ್ಯವಾಗದಂತಾಗಿತ್ತು.