ಚಾಮರಾಜನಗರ: ಸುವರ್ಣಾವತಿ ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ತಾಲೂಕಿನ ಅಟ್ಟುಗೂಳಿಪುರ ಗ್ರಾಮದ ನಿವಾಸಿ ಶಿವಸ್ವಾಮಿ (24) ಮೃತರು.
ಈತ ಗೆಳೆಯ ದಿಲೀಪ್‌ಕುಮಾರ್ ಜತೆಗೆ ಸುವರ್ಣಾವತಿ ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿಯುವ ಸಲುವಾಗಿ ಬಲೆ ಬಿಡಲು ಸೋಮವಾರ ರಾತ್ರಿ ತೆಪ್ಪದಲ್ಲಿ ತೆರಳಿದ್ದ. ಈ ಸಂದರ್ಭದಲ್ಲಿ ತೆಪ್ಪ ಮಗುಚಿದ ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ದಿಲೀಪ್‌ಕುಮಾರ್ ಈಜಿಕೊಂಡು ದಡ ಸೇರಿದ್ದು, ಶಿವಸ್ವಾಮಿ ಈಜಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ವಿಚಾರ ತಿಳಿಯುತ್ತಿದ್ದಂತೆಯೇ ಪೂರ್ವ ಠಾಣೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದರು.