ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೂತನ ವರ್ಷದ ಕ್ಯಾಲೆಂಡರ್‌ಅನ್ನು ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬಿಡುಗಡೆ ಮಾಡಿದರು. ಎ.ಈ ರಘು, ಮಹದೇವಸ್ವಾಮಿ, ಮುರುಗೇಶ್ ಇತರರು ಇದ್ದರು.  
ಚಾಮರಾಜನಗರ

ನೂತನ ಕ್ಯಾಲೆಂಡರ್‌ನಲ್ಲಿ ಸಮಗ್ರ ಮಾಹಿತಿ

ಎಂ.ರವಿ
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸೋಮವಾರ ಸಂಜೆ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ 2026ರ ನೂತನ ವರ್ಷದ ಕ್ಯಾಲೆಂಡರ್‌ಅನ್ನು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬಿಡುಗಡೆ ಮಾಡಿದರು.
ದೇಗುಲದಲ್ಲಿ ಸಂಜೆ ಬೇಡಗಂಪಣ ಅರ್ಚಕರು ಶ್ರೀಗಳು, ಪ್ರಾಧಿಕಾರದ ಅಧಿಕಾರಿಗಳು ಹಾಗೂ ನೌಕರರ ಸಮ್ಮುಖದಲ್ಲಿ ನೂತನ ಕ್ಯಾಲೆಂಡರ್‌ಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಎಲ್ಲರೂ ಜತೆಗೂಡಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ಈ ವೇಳೆ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪ್ರಾಧಿಕಾರದಿಂದ ಪ್ರತಿ ವರ್ಷವೂ ಹೊರ ತರುತ್ತಿರುವ ಕ್ಯಾಲೆಂಡರ್‌ನಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುವ ಜಾತ್ರಾ ಮಹೋತ್ಸವ, ವಿಶೇಷ ಪೂಜೆ ಹಾಗೂ ಇನ್ನಿತರ ಧಾರ್ಮಿಕ ಸೇವೆಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ಹಾಗಾಗಿ ಭಕ್ತರು ಭಕ್ತಿ-ಭಾವದಿಂದ ಖರೀದಿಸುತ್ತಾರೆ. ಕ್ಯಾಲೆಂಡರ್‌ನಲ್ಲಿ ಮಾದಪ್ಪನ ಲೀಲೆಯುಳ್ಳ ದೃಶ್ಯಗಳನ್ನು ಚಿತ್ರಿಸಲಾಗಿದ್ದು, ಆಕರ್ಷಿತವಾಗಿದೆ. ಇದರಿಂದ ಬೇಡಿಕೆಯು ಹೆಚ್ಚಿದ್ದು, ಕ್ಯಾಲೆಂಡರ್ ಪ್ರತಿ ವರ್ಷವೂ ನಾವಿನ್ಯತೆಯನ್ನು ಪಡೆದುಕೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ನೌಕರರಾದ ಮಹದೇವಸ್ವಾಮಿ, ಜನಾರ್ಧನ್ ಹಾಗೂ ಇನ್ನಿತರರು ಇದ್ದರು.